ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆಸಿಕೊಟ್ಟ ಲೈವ್ ಮ್ಯೂಸಿಕ್ ಕಾನ್ಸರ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಜೂನ್ 27ರಂದು ಹೈದರಾಬಾದ್‌ನ ‘ಕ್ವೇಕ್ ಅರೆನಾ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಅಭಿಮಾನಿಗಳು ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.
3 ಗಂಟೆ ತಡವಾಗಿ ಬಂದ ಗಾಯಕಿ!
ರಾತ್ರಿ 8 ಗಂಟೆಗೆ ಆರಂಭವಾಗಬೇಕಿದ್ದ ಶೋಗೆ ಜಾಸ್ಮಿನ್ ಬಂದಿದ್ದು ರಾತ್ರಿ 11.20ಕ್ಕೆ! ಮೂರು ಗಂಟೆ ತಡವಾಗಿ ಬಂದರೂ ಅವರು ಅಭಿಮಾನಿಗಳಲ್ಲಿ ಕ್ಷಮೆ ಕೇಳಲಿಲ್ಲ. ಕನಿಷ್ಠ ವಿಷಾದವನ್ನೂ ವ್ಯಕ್ತಪಡಿಸದೆ ಉದ್ಧಟತನ ತೋರಿದ್ದಾರೆ ಎಂದು ನೆಟ್ಟಿಗರು ಗಂಭೀರ ಆರೋಪ ಮಾಡಿದ್ದಾರೆ.
ಲೈವ್ ಸಿಂಗಿಂಗ್ ಇಲ್ಲ, ಬರೀ ಲಿಪ್-ಸಿಂಕ್!
“ಅವರು ಲೈವ್ ಶೋನಲ್ಲಿ ಹಾಡುವ ಬದಲು ಕೇವಲ ಲಿಪ್-ಸಿಂಕ್ (Lip Sync) ಮಾಡಿದ್ದಾರೆ. ಕೊನೆಯಲ್ಲಿ ಯಾರಿಗೂ ಧನ್ಯವಾದ ಅಥವಾ ಸಾರಿ ಹೇಳದೆ ದಿಢೀರನೆ ವೇದಿಕೆಯಿಂದ ನಿರ್ಗಮಿಸಿದರು” ಎಂದು ಬೇಸರಗೊಂಡ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಆಯೋಜಕರ ವಿರುದ್ಧವೂ ಸಾರ್ವಜನಿಕರ ಆಕ್ರೋಶ
ಕೇವಲ ಗಾಯಕಿ ಮಾತ್ರವಲ್ಲದೆ, ಕಾರ್ಯಕ್ರಮ ಆಯೋಜಿಸಿದ್ದ ಸಂಸ್ಥೆಯ ವಿರುದ್ಧವೂ ಸಾರ್ವಜನಿಕರು ತಿರುಗಿಬಿದ್ದಿದ್ದಾರೆ. ಈವೆಂಟ್ ತಡವಾಗುವ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಮತ್ತು ಅಲ್ಲಿನ ನಿರ್ವಹಣಾ ಸಿಬ್ಬಂದಿ ಸಾರ್ವಜನಿಕರೊಂದಿಗೆ ಅತ್ಯಂತ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೂರದ ಊರುಗಳಿಂದ ಬಂದಿದ್ದ ಅದೆಷ್ಟೋ ಅಭಿಮಾನಿಗಳು ರಾತ್ರಿ 11.30ರವರೆಗೆ ಕಾದು ಸುಸ್ತಾಗಿ ವಾಪಸ್ ಹೋಗಿದ್ದಾರೆ. ಇನ್ನು ಕೆಲವರು ಜಾಸ್ಮಿನ್ ಅವರ ಹಳೆಯ ವಿಡಿಯೋಗಳನ್ನು ಪ್ರಸ್ತಾಪಿಸಿ, ‘ಅವರು ಬಹುತೇಕ ಎಲ್ಲಾ ಶೋಗಳಲ್ಲೂ ಕೇವಲ ಲಿಪ್-ಸಿಂಕ್ ಮಾತ್ರ ಮಾಡುತ್ತಾರೆ’ ಎಂದು ಲೇವಡಿ ಮಾಡುತ್ತಿದ್ದಾರೆ. ಒಟ್ಟಾರೆ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.



