ಹೊಸದಿಗಂತ ಬಳ್ಳಾರಿ:
ನಗರದ ರಾಜಕೀಯ ವಲಯದಲ್ಲಿ ದ್ವೇಷದ ಕಿಚ್ಚು ಮನೆ ಮಾಡಿದ್ದು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಕೋಟಿ ಬೆಲೆಬಾಳುವ ಮನೆ ಬೆಂಕಿಗಾಹುತಿಯಾಗಿದೆ. ಶ್ರೀಮತಿ ರುಕ್ಮಿಣಿಮ್ಮ ಚಂಗಾರೆಡ್ಡಿ ಬಡಾವಣೆಯಲ್ಲಿರುವ ‘ಜಿ ಸ್ಕ್ವಾಯರ್’ ಮಾದರಿಯ ಈ ಮನೆಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರೇ ಬೆಂಕಿ ಹಚ್ಚಿದ್ದಾರೆ ಎಂದು ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಗಂಭೀರವಾಗಿ ಆರೋಪಿಸಿದ್ದಾರೆ.

ಶುಕ್ರವಾರ ರಾತ್ರಿ ಬೆಂಕಿ ಅನಾಹುತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಸೋಮಶೇಖರ್ ರೆಡ್ಡಿ, ಪರಿಸ್ಥಿತಿಯನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಸುಮಾರು 8 ಕೋಟಿ ರೂಪಾಯಿ ವೆಚ್ಚದ ಈ ಮನೆಯಲ್ಲಿದ್ದ ಫರ್ನಿಚರ್, ಎಸಿ ಸೇರಿದಂತೆ ಪ್ರತಿಯೊಂದು ವಸ್ತುವೂ ಸುಟ್ಟು ಭಸ್ಮವಾಗಿದೆ. ಇದು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿ ಮಾಡಿದ ಸಂಚು,” ಎಂದು ಅವರು ದೂರಿದರು.
ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆ ಮತ್ತು ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಸಾವಿನ ನಂತರ, ಶಾಸಕ ನಾರಾ ಭರತ್ ರೆಡ್ಡಿ ಅವರು “ನಾನು ಒಂದು ಕರೆ ನೀಡಿದರೆ ಬಳ್ಳಾರಿಯನ್ನೇ ಭಸ್ಮ ಮಾಡುವೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಹೇಳಿಕೆಯ ಬೆನ್ನಲ್ಲೇ ಈ ಘಟನೆ ನಡೆದಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜನವರಿ 1ರ ಗಲಭೆಯಲ್ಲಿ ಭಾಗಿಯಾಗಿದ್ದವರೇ ಈ ಕೃತ್ಯ ಎಸಗಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ಪ್ರತಿಪಾದಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಎಸ್ಪಿ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಿದ್ಧತೆ ನಡೆಸಲಾಗಿದೆ.


