February 3, 2026
Tuesday, February 3, 2026
spot_img

ರೀಲ್ಸ್ ಹುಚ್ಚಾಟಕ್ಕೆ ಸುಟ್ಟಿತೇ ಮನೆ? ರೆಡ್ಡಿ ‘ಮಾಡೆಲ್ ಹೌಸ್’ ಬೆಂಕಿ ಪ್ರಕರಣಕ್ಕೆ ಹೊಸ ಟ್ವಿಸ್ಟ್!

ಹೊಸದಿಗಂತ ಬಳ್ಳಾರಿ:

ನಗರದ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಅವರ ಮಾಲೀಕತ್ವದ ‘ಮಾಡೆಲ್ ಹೌಸ್’ಗೆ ಬೆಂಕಿ ಹಚ್ಚಿರುವ ಘಟನೆಗೆ ಸಂಬಂಧಿಸಿದಂತೆ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಎಂಟು ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಸುಮನ್ ಪನ್ನೇಕರ್ ಅವರು, “ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಇದು ಕೇವಲ ಮಾಡೆಲ್ ಹೌಸ್ ಆಗಿದ್ದು, ಇಲ್ಲಿ ಯಾರೂ ವಾಸವಿರಲಿಲ್ಲ. ವಶಕ್ಕೆ ಪಡೆದಿರುವ ಎಂಟು ಜನರಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರಿದ್ದಾರೆ,” ಎಂದು ಮಾಹಿತಿ ನೀಡಿದರು.

ಪ್ರಾಥಮಿಕ ತನಿಖೆಯ ಪ್ರಕಾರ, ಈ ಯುವಕರು ರೀಲ್ಸ್ ಮಾಡಲು ಮತ್ತು ಫೋಟೋಶೂಟ್‌ಗಾಗಿ ಈ ಮನೆಗೆ ಬಂದಿದ್ದರು ಎನ್ನಲಾಗಿದೆ. ಮನೆಯ ಮಹಡಿಯ ಮೇಲೆ ಫೋಟೋ ತೆಗೆಸಿಕೊಳ್ಳುವಾಗ ಧೂಮಪಾನ ಮಾಡಿರಬಹುದು, ಆ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅನಾಹುತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ವಶಕ್ಕೆ ಪಡೆದವರಲ್ಲಿ ಮುಂಬೈ ಮೂಲದವರೂ ಇದ್ದಾರೆ. ಆದರೆ ಪ್ರಾಥಮಿಕವಾಗಿ ಇವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರುವುದು ಕಂಡುಬಂದಿಲ್ಲ.

ದೂರಿನಲ್ಲಿ ಉಲ್ಲೇಖಿಸಿದಂತೆ ಬೆಲೆಬಾಳುವ ಯಾವುದೇ ವಸ್ತುಗಳು ಸುಟ್ಟುಹೋಗಿಲ್ಲ. ವಾಸ್ತವವಾಗಿ ಆ ಮನೆಯಲ್ಲಿ ಅಂತಹ ಯಾವುದೇ ವಸ್ತುಗಳು ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಸದ್ಯ ಪ್ರಕರಣದ ತನಿಖೆ ಮುಂದುವರೆದಿದ್ದು, ಎಫ್‌ಎಸ್‌ಎಲ್ ವರದಿ ಬಂದ ನಂತರ ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !