April 28, 2026
Tuesday, April 28, 2026
spot_img

ನದಿಬಾಗದ ಗುಡ್ಡದಲ್ಲಿ ಅಗ್ನಿ ಅವಘಡ: ಕಿಡಿಗೇಡಿಗಳ ಸಿಗರೇಟ್ ಕೃತ್ಯಕ್ಕೆ ಹೊತ್ತಿ ಉರಿದ ವನರಾಶಿ

ಹೊಸದಿಗಂತ ಅಂಕೋಲಾ:

ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ನದಿಬಾಗ ಸಮುದ್ರ ತೀರದ ಸಮೀಪದ ಗುಡ್ಡವೊಂದಕ್ಕೆ ಸೋಮವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ, ಅಪಾರ ಪ್ರಮಾಣದ ಗಿಡಮರಗಳು ಅಗ್ನಿಗೆ ಆಹುತಿಯಾದ ಘಟನೆ ನಡೆದಿದೆ.

ಗುಡ್ಡದ ಮೇಲಿರುವ ಒಣ ಪೊದೆಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಗಾಳಿಯ ವೇಗಕ್ಕೆ ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಪರಿಸರಕ್ಕೆ ವ್ಯಾಪಿಸಿತು. ಇದರಿಂದಾಗಿ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯ ನಿವಾಸಿಗಳು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಬೆಂಕಿ ಹತ್ತಿದ ಜಾಗಕ್ಕೆ ಅಗ್ನಿಶಾಮಕ ವಾಹನ ತೆರಳಲು ದಾರಿ ಇಲ್ಲದ ಕಾರಣ, ಸಿಬ್ಬಂದಿಗಳು ಅಗ್ನಿ ನಿಯಂತ್ರಕ ಸಿಲಿಂಡರುಗಳನ್ನು ಬೆನ್ನಿಗೆ ಹೊತ್ತುಕೊಂಡು ಗುಡ್ಡವೇರಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಕರಾವಳಿ ಕಾವಲು ಪಡೆಯ ಸುಜನ್ ನಾಯಕ, ಕೆ.ಎನ್.ಡಿ ಸಿಬ್ಬಂದಿ ಪ್ರಶಾಂತ ಪಿರನಕರ್ ಹಾಗೂ ಸ್ಥಳೀಯ ಯುವಕರಾದ ವಿಘ್ನೇಶ್ವರ ನಾಯ್ಕ, ರೋಷನ ಖಾರ್ವಿ, ಪ್ರಜ್ವಲ ಖಾರ್ವಿ ಮತ್ತು ರವೀಶ ಖಾರ್ವಿ ಅವರು ಜೀವದ ಹಂಗು ತೊರೆದು ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಈ ಬೆಂಕಿ ಆಕಸ್ಮಿಕವಲ್ಲ, ಬದಲಾಗಿ ಕಿಡಿಗೇಡಿಗಳ ಕೃತ್ಯ ಎನ್ನುವ ಆರೋಪ ಕೇಳಿಬರುತ್ತಿದೆ. ಬೆಂಕಿ ಕಾಣಿಸಿಕೊಳ್ಳುವ ಮೊದಲು ಇಬ್ಬರು ವ್ಯಕ್ತಿಗಳು ಗುಡ್ಡದ ಮೇಲೆ ಸಿಗರೇಟ್ ಸೇದಲು ಹೋಗಿದ್ದನ್ನು ಸ್ಥಳೀಯರು ಗಮನಿಸಿದ್ದು, ಅವರೇ ಈ ಅವಾಂತರಕ್ಕೆ ಕಾರಣವೆನ್ನಲಾಗಿದೆ.

ನದಿಬಾಗ ಕಡಲ ತೀರದ ಸುತ್ತಮುತ್ತ ಕಿಡಿಗೇಡಿಗಳ ಹಾವಳಿ ಮಿತಿ ಮೀರಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಇಲ್ಲಿನ ಕುಡಿಯುವ ನೀರಿನ ಘಟಕದ ಗಾಜನ್ನು ಒಡೆದು ಹಾಕಲಾಗಿತ್ತು. ಪ್ರವಾಸಿ ತಾಣದ ಆಸುಪಾಸಿನಲ್ಲಿ ಮದ್ಯಪಾನ, ಸಿಗರೇಟ್ ಹಾಗೂ ಮಾದಕ ವಸ್ತುಗಳ ಸೇವನೆಯಂತಹ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !