Sunday, December 28, 2025

ಕನ್ನಡಿಗರ ಸ್ವಾಭಿಮಾನ ಕೇರಳಕ್ಕೆ ಅಡವಿಟ್ಟರಾ ಸಿಎಂ?: ಸಿ.ಟಿ.ರವಿ ಆಕ್ರೋಶದ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

“ರಾಜಕೀಯ ಸ್ವಾರ್ಥ ಮತ್ತು ಅಧಿಕಾರದ ಹಪಾಹಪಿಗೆ ಕರ್ನಾಟಕದ ಹಿತಾಸಕ್ತಿ ಹಾಗೂ ಕನ್ನಡಿಗರ ಸ್ವಾಭಿಮಾನವನ್ನು ಒತ್ತೆ ಇಡಬೇಡಿ” ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ಅವರು, ಕರ್ನಾಟಕದಲ್ಲಿ ನಡೆಯುತ್ತಿದೆ ಎನ್ನಲಾದ ‘ಕೇರಳ ದರ್ಬಾರ್’ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖವಾಗಿ ಕೊಗಿಲು ಗ್ರಾಮದ ಅಕ್ರಮಗಳ ಕುರಿತು ಮಾತನಾಡಿದ ಅವರು, ಈ ಹಿಂದೆ ಇದೇ ಸರ್ಕಾರ ಅಕ್ರಮ ಎಂದು ಒಪ್ಪಿಕೊಂಡಿತ್ತು. ಆದರೆ ಈಗ ರಾಜಕೀಯ ಅನಿವಾರ್ಯತೆಗಾಗಿ ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ನೆರೆಯ ರಾಜ್ಯದ ಅಕ್ರಮಗಳನ್ನು ಬೆಂಬಲಿಸುತ್ತಿದ್ದಾರೆ. ಮೊದಲು ಅಕ್ರಮ ಎಂದವರು ಈಗ ಮೌನವಾಗಿರುವುದು ಅಥವಾ ಸಮರ್ಥಿಸಿಕೊಳ್ಳುತ್ತಿರುವುದು ಏಕೆ? ರಾಜಕೀಯ ಲೆಕ್ಕಾಚಾರಗಳು ನಿಮಗಿರಬಹುದು, ಆದರೆ ಕರ್ನಾಟಕದ ಜನತೆಗಿಲ್ಲ. ಅಕ್ರಮ ಎಂದ ಮೇಲೆ ಅದನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕೇ ಹೊರತು ಸಮರ್ಥಿಸಬಾರದು.

“ನಾವು ಮಾತನಾಡಿದರೆ ಅದನ್ನು ರಾಜಕೀಯ ಎನ್ನಲಾಗುತ್ತದೆ. ಆದರೆ ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕನ್ನಡ ಪರ ಸಂಘಟನೆಗಳು ಧ್ವನಿ ಎತ್ತಬೇಕು. ಕನ್ನಡಿಗರ ಹಿತ ಕಾಯುವ ಅಧಿಕಾರವನ್ನು ಯಾವುದೇ ಪಕ್ಷಕ್ಕೆ ಒತ್ತೆ ಇಟ್ಟಿಲ್ಲ ಎಂಬುದನ್ನು ಸಾರಬೇಕು” ಎಂದು ಅವರು ಮನವಿ ಮಾಡಿದರು.

ಕೇರಳದ ಸಂಸದರು ಬಂದು ಕರ್ನಾಟಕಕ್ಕೆ ಪಾಠ ಮಾಡುವ ಅಗತ್ಯವಿಲ್ಲ. ರಾಜ್ಯದ ಹಿತಾಸಕ್ತಿ ಕಡೆಗಣಿಸಿ ರಾಜಕಾರಣ ಮಾಡಿದರೆ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

error: Content is protected !!