April 13, 2026
Monday, April 13, 2026
spot_img

ಉದ್ಘಾಟನೆಗೂ ಮುನ್ನವೇ ರಕ್ತಸಿಕ್ತವಾಯ್ತೇ ಎಕ್ಸ್‌ಪ್ರೆಸ್‌ವೇ? ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಸರಣಿ ಅಪಘಾತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14ರಂದು ಅದ್ಧೂರಿಯಾಗಿ ಉದ್ಘಾಟಿಸಬೇಕಿದ್ದ ಬಹುನಿರೀಕ್ಷಿತ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ಉದ್ಘಾಟನೆಗೆ ಒಂದು ದಿನ ಮುನ್ನವೇ ಭೀಕರ ಸರಣಿ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಬಿಹಾರಿಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮೋಹಂದ್ ರೇಂಜ್‌ನಲ್ಲಿ ಈ ಅವಘಡ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಅತಿ ವೇಗವಾಗಿ ಬಂದ ಎಲ್‌ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್‌ನ ಬ್ರೇಕ್ ವೈಫಲ್ಯಗೊಂಡಿದ್ದೇ ಈ ಅವಘಡಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಟ್ರಕ್ ರಸ್ತೆಯಲ್ಲಿದ್ದ ಸುಮಾರು 7 ವಾಹನಗಳಿಗೆ ಸರಣಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರುಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನಗಳ ರಾಶಿಯೇ ರಸ್ತೆಯ ಮೇಲೆ ಗುಡ್ಡೆ ಬಿದ್ದಂತಿತ್ತು. ಈ ಭೀಕರ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅದೃಷ್ಟವಶಾತ್, ಈ ಭೀಕರ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಗೊಂಡ ಪ್ರಯಾಣಿಕರನ್ನು ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ತಂಡಗಳು ಆಸ್ಪತ್ರೆಗೆ ದಾಖಲಿಸಿವೆ. ಅಪಘಾತದ ತೀವ್ರತೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ವಿಶೇಷವೆಂದರೆ, ನಾಳೆ ಪ್ರಧಾನಿ ಮೋದಿ ಅವರು ಈ ರಸ್ತೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಷ್ಟೇ ಅಲ್ಲದೆ, ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಭದ್ರತಾ ವ್ಯವಸ್ಥೆ ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ವಾಹನಗಳನ್ನು ತೆರವುಗೊಳಿಸಿದ್ದು, ವಿಐಪಿ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !