ಇತ್ತೀಚಿನ ದಿನಗಳಲ್ಲಿ ಮಿಕ್ಸಿ, ಗ್ರೈಂಡರ್ ಇದ್ದರೂ, ಹಳೆ ಕಾಲದ ಆಹಾರದ ಪದ್ಧತಿಯತ್ತ ಜನರ ಆಸಕ್ತಿ ಹೆಚ್ಚಾಗುತ್ತಿದೆ. ಇದರಲ್ಲಿ ಪ್ರಮುಖವಾದದ್ದು ಅಂದರೆ “ರುಬ್ಬುವ ಕಲ್ಲು” (Grinding Stone). ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು, ಜೀರಿಗೆ ಅಷ್ಟೇ ಯಾಕೆ, ಮಸಾಲೆ ರುಬ್ಬೊಕೆ, ಹಿಟ್ಟು ಕಡಿಯೋದು ಕೂಡ ಮಿಕ್ಸಿಯಲ್ಲಿ ಮಾಡಿದ್ರೆ ಬೇರೆ ರುಚಿ, ಆದರೆ ಇದೇ ವಸ್ತುಗಳನ್ನು ಕಲ್ಲಿನಲ್ಲಿ ಕುಟ್ಟಿ ಅಥವಾ ರುಬ್ಬಿದರೆ ಬರುವ ಪರಿಪೂರ್ಣ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು.
ಆದರೆ, ಹೊಸದಾಗಿ ಮನೆಗೆ ತಂದ ಕಲ್ಲನ್ನು ತಕ್ಷಣವೇ ಬಳಸೋದು ಸರಿಯಲ್ಲ. ಆದುದರಿಂದ, ಅದನ್ನು ಸರಿಯಾಗಿ ಶುದ್ಧಗೊಳಿಸಿದ ನಂತರವೇ ಬಳಸಬೇಕು.
ಬಿಸಿ ನೀರು ಹಾಕಿ ತೊಳೆಯಿರಿ:
ಮೊದಲು ಕಲ್ಲಿಗೆ ಬಿಸಿ ನೀರು ಹಾಕಿ 2 ನಿಮಿಷ ಬಿಟ್ಟು ಬಿಡಿ. ನಂತರ ತೆಂಗಿನ ನಾರಿನಿಂದ ಚೆನ್ನಾಗಿ ತಿಕ್ಕಿ ತೊಳೆಯಿರಿ. ಮತ್ತೆ ಬಿಸಿ ನೀರು ಹಾಕಿ ತೊಳೆದು ಒಣಗಿಸಿ.
ಅಕ್ಕಿ ಹಾಕಿ ಕುಟ್ಟಿ/ರುಬ್ಬಿ:
ಸ್ವಲ್ಪ ಹಳೆ ಅಕ್ಕಿಯನ್ನು ಕಲ್ಲಿನ ಮೇಲೆ ಹಾಕಿ ಕುಟ್ಟಿ. ಇದರ ಮೂಲಕ ಕಲ್ಲಿನ ಮೇಲಿನ ಚಿಕ್ಕ ಕಣಗಳು, ಮಣ್ಣು, ಹೊಸ ಕಲ್ಲಿನ ದುರ್ವಾಸನೆ ಎಲ್ಲವೂ ಹೋಗುತ್ತವೆ.
ಅಕ್ಕಿ ಪೇಸ್ಟ್ ಮಾಡಿ:
ಅದೇ ಅಕ್ಕಿಗೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಕಲ್ಲಿನ ಮೇಲ್ಭಾಗಕ್ಕೆ ಹಚ್ಚಿ, ಸಣ್ಣ ಬ್ರಷ್ ಅಥವಾ ಕೈಯಿಂದ ಚೆನ್ನಾಗಿ ತಕ್ಕಿ ತೊಳೆಯಿರಿ.
ಒರೆಸಿ ಒಣಗಿಸಿ:
ಇದಾದ ನಂತರ ಕಲ್ಲನ್ನು ನೀರಿನಿಂದ ತೊಳೆದು, ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಒಣಗಿಸಿ.
ಅರಿಶಿಣದಿಂದ ತಿಕ್ಕಿ ಶುದ್ಧಗೊಳಿಸಿ:
ಸ್ವಲ್ಪ ಅರಿಶಿಣ ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಕಲ್ಲಿಗೆ ತಿಕ್ಕಿ ಹಚ್ಚಿ, 10 ನಿಮಿಷ ಬಿಟ್ಟು ನಂತರ ಚೆನ್ನಾಗಿ ತೊಳೆಯಿರಿ.
ಹೀಗೆ ಶುದ್ಧಗೊಳಿಸಿದ ನಂತರ ಮಾತ್ರ ನೀವು ಕಲ್ಲನ್ನು ಉಪಯೋಗಿಸಬಹುದು. ಇಲ್ಲದಿದ್ದರೆ, ಮಸಾಲೆಯಲ್ಲಿ ಕಲ್ಲಿನ ವಾಸನೆ ಅಥವಾ ಧೂಳು ಸೇರಬಹುದು. ಇದು ಆರೋಗ್ಯಕ್ಕೂ ಹಾನಿಕಾರಕ.
ಎಷ್ಟು ಎಲೆಕ್ಟ್ರಿಕ್ ಉಪಕರಣಗಳಿದ್ದರೂ, ಹಳೆ ಕಾಲದ ಕಲ್ಲಿನ ಮಸಾಲೆ ರುಚಿಗೆ ಯಾವುದೇ ಮಿಕ್ಸಿ ಸಮಾನವಲ್ಲ. ನೀವು ಕೂಡ ಒಪ್ಪುತ್ತೀರಾ?