ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ನೂರು ಕೋಟಿ ಕ್ಲಬ್ ಸೇರಿದೆ.
ಕಾಂತಾರ ಚಿತ್ರಕ್ಕೆ ಸಿನಿ ಪ್ರೇಕ್ಷಕರು ಮಾತ್ರವಲ್ಲದೇ ಪರಭಾಷಾ ಸ್ಟಾರ್‌ಗಳೂ ಸಹ ಫಿದಾ ಆಗಿದ್ದು, ಚಿತ್ರ ವೀಕ್ಷಿಸಿ ಪ್ರಶಂಸಿಸಿದ್ದಾರೆ.
ಇನ್ನು ಕನ್ನಡದ ಹಲವಾರು ನಟ – ನಟಿಯರು, ನಿರ್ದೇಶಕರು, ನಿರ್ಮಾಪಕರು ಕಾಂತಾರ ಚಿತ್ರ ವೀಕ್ಷಿಸಿ ಹೊಗಳಿದ್ದರು. ಕಿಚ್ಚ ಸುದೀಪ್ ಚಿತ್ರ ವೀಕ್ಷಿಸಿ ವಿಶೇಷವಾಗಿ ಟ್ವೀಟ್ ಮಾಡುವ ಮೂಲಕ ಕಾಂತಾರ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದರು.
ಇದಾದ ಬೆನ್ನಲ್ಲೇ ಕನ್ನಡದ ಉಳಿದ ಸ್ಟಾರ್ ನಟರಾದ ದರ್ಶನ್, ಯಶ್ ಹಾಗೂ ಶಿವಣ್ಣ ಚಿತ್ರದ ಯಶಸ್ಸಿಗೆ ಶುಭ ಕೋರಲಿಲ್ಲ, ಚಿತ್ರದ ಕುರಿತು ಯಾವುದೇ ಟ್ವೀಟ್ ಮಾಡಲಿಲ್ಲ ಎಂಬ ಆರೋಪ ಎದುರಾಗಿತ್ತು.
ಆದರೆ ಇದೀಗ ಈ ಆರೋಪಕ್ಕೆ ಉತ್ತರ ದೊರೆತಿದ್ದು ಸ್ವತಃ ರಿಷಬ್ ಶೆಟ್ಟಿಯೇ ತುಟಿಬಿಚ್ಚಿದ್ದಾರೆ.
ಇತ್ತೀಚೆಗಷ್ಟೆ ಕನ್ನಡದ ಖಾಸಗಿ ಸುದ್ದಿ ವಾಹಿನಿ ದಿಗ್ವಿಜಯ ರಿಷಬ್ ಶೆಟ್ಟಿಯವರ ಸಂದರ್ಶನವನ್ನು ಮಾಡಿತ್ತು. ಈ ಸಂದರ್ಶನದಲ್ಲಿ ಚಿತ್ರ ಹೇಗಾಯಿತು, ಯಾರೆಲ್ಲಾ ತಮ್ಮ ಬೆನ್ನಿಗೆ ನಿಂತ್ರು, ಚಿತ್ರ ಎಷ್ಟರ ಮಟ್ಟಿಗೆ ಪ್ರಶಂಸೆ ಪಡೆದುಕೊಳ್ಳುತ್ತಿದೆ ಎಂಬುದರ ಕುರಿತು ಮನಬಿಚ್ಚಿ ಮಾತನಾಡಿದರು.
ಈ ಪ್ರಶ್ನೆಗೆ ಉತ್ತರಿಸಿದ ರಿಷಬ್ ಶೆಟ್ಟಿ ‘ಫಸ್ಟ್ ರಿಲೀಸ್ ದಿನ ಯಶ್ ಅವರು ಫೋನ್ ಮಾಡಿ ವಿಷ್ ಮಾಡಿದ್ರು, ಚೆನ್ನಾಗಾಗುತ್ತೆ ಚಿನ್ನ, ಸೋ ಡೋಂಟ್ ವರಿ ಚೆನ್ನಾಗಾಗುತ್ತೆ ಒಳ್ಳೆ ರೀಚ್ ಆಗುತ್ತೆ’ ಎಂದರು. ಈ ಮೂಲಕ ಯಶ್ ಕಾಂತಾರಕ್ಕೆ ಶುಭಕೋರಿಲ್ಲ ಎಂಬ ಕೊಂಕಿಗೆ ರಿಷಬ್ ಶೆಟ್ಟಿ ಫುಲ್‌ಸ್ಟಾಪ್ ಇಟ್ಟರು.