ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಈಗಾಗಲೇ ವಿಪಕ್ಷಗಳು ರಣತಂತ್ರ ಹೂಡುತ್ತಿದ್ದು, ಇದಕ್ಕಾಗಿ ಪಾಟ್ನಾದಲ್ಲಿ ಇತ್ತೀಚೆಗೆ ವಿಪಕ್ಷಗಳ ಬೃಹತ್ ಮೈತ್ರಿ ಸಭೆ ನಡೆಸಲಾಗಿತ್ತು.
ಆದ್ರೆ ಈ ಸಭೆ ಬೆನ್ನಲ್ಲೇ ಬಿರುಕು ಕಾಣಿಸಿಕೊಂಡಿತ್ತು. ಟಿಎಂಸಿ, ಸಿಪಿಎಂ, ಆಮ್ ಆದ್ಮಿ ಪಾರ್ಟಿಗಳು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿತ್ತು. ಇದೀಗ ಮತ್ತೆ ಟಿಎಂಸಿ ಹೇಳಿಕೆ ವಿಪಕ್ಷಗಳ ಮೈತ್ರಿಗೆ ಹಿನ್ನಡೆ ತಂದಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮಣಿಸಲು ನಮಗೆ ಯಾವುದೇ ಮೈತ್ರಿ ಅಗತ್ಯವಿಲ್ಲ. ಬಂಗಾಳದಲ್ಲಿ ಟಿಎಂಸಿ ಬಲಿಷ್ಠವಾಗಿದೆ. ಇಲ್ಲಿ ಏಕಾಂಗಿಯಾಗಿ ಬಿಜೆಪಿ ವಿರುದ್ದ ಹೋರಾಡುತ್ತೇವೆ. ಅಭೂತಪೂರ್ವ ಗೆಲುವು ಸಾಧಿಸುತ್ತೇವೆ ಎಂದು ಟಿಎಂಸಿ ಸಂಸದ ಸೌಗತ ರಾಯ್ ಹೇಳಿದ್ದಾರೆ.
ಈ ಮೂಲಕ ನಮಗೆ ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ.
ಈಗಾಗಲೇ ಮೈತ್ರಿಯಿಂದ ಕೆಲ ಪಕ್ಷಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದ ಟಿಎಂಸಿ ಏಕಾಂಗಿ ಹೋರಾಟದ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಬಂಗಾಳದಲ್ಲಿ ಮೈತ್ರಿ ಮಾಡಿಕೊಳ್ಳಲ್ಲ ಅನ್ನೋ ಪರೋಕ್ಷ ಎಚ್ಚರಿಕೆಯನ್ನು ಟಿಎಂಸಿ ನೀಡಿದೆ.