Tuesday, September 9, 2025

ಡಿಜಿಟಲ್‌ ಅರೆಸ್ಟ್‌: 30 ಲಕ್ಷ ರೂ. ಕಳೆದುಕೊಂಡ ಮಾಜಿ ಶಾಸಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಔರದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ 30 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.

ಸಿಬಿಐ, ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿದ್ದು, ಮಾಜಿ ಶಾಸಕರಿಂದ ಹಂತ ಹಂತವಾಗಿ 30 ಲಕ್ಷ ರೂ. ಹಣವನ್ನು ಖದೀಮರು ವರ್ಗಾಯಿಸಿಕೊಂಡಿದ್ದಾರೆ. ಘಟನೆ ಸಂಬಂಧ ಬೆಂಗಳೂರು ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೊದಲು ಆಗಸ್ಟ್ 12ರಂದು ಸಿಬಿಐ ಆಫೀಸರ್ ಎಂದು ಕರೆ ಮಾಡಿದ್ದ ಖದೀಮರು, ನೀವು ನರೇಶ್ ಗೋಯಲ್ ಮನಿ ಲಾಡರಿಂಗ್ ಕೇಸ್‌ನಲ್ಲಿ ಭಾಗಿಯಾಗಿದ್ದೀರಿ. ನರೇಶ್ ಗೋಯಲ್ ಜೊತೆ ಅಕ್ರಮ ವ್ಯವಹಾರ ಮಾಡಿದ್ದೀರಿ ಎಂದು ಹೆದರಿಸಿದ್ದರು. ಆ.13ರಂದು ಸಿಬಿಐ ಡಿಸಿಪಿ ಎಂದು ಮತ್ತೋರ್ವ ಕರೆ ಮಾಡಿ, ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಾ, ಕಾಲ್ ಕಟ್ ಮಾಡಬೇಡಿ ಎಂದು ಹೆದರಿಸಿದ್ದ.

ಬಳಿಕ ಆನ್‌ಲೈನ್‌ನಲ್ಲಿ ಫೇಕ್ ಜಡ್ಜ್ ಮುಂದೆ ಹಾಜರು ಪಡಿಸಿದ್ದ ಖದೀಮರು ಕೋರ್ಟ್ ಹಾಲ್ ರೀತಿ ಸೆಟಪ್ ಮಾಡಿ ನಂಬಿಕೆ ಹುಟ್ಟಿಸಿದ್ದರು. ನಮ್ಮದು ತಪ್ಪಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಿ ಎಂದು 10 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದರು. ಬಳಿಕ ಪ್ರಾಪರ್ಟಿ ತನಿಖೆ ಮಾಡಬೇಕೆಂದು 20 ಲಕ್ಷ ರೂ. ಡೆಪಾಸಿಟ್ ಮಾಡಿಸಿಕೊಂಡಿದ್ದರು. ಹೀಗೆ ಖದೀಮರ ಮಾತು ನಂಬಿ ಹಂತ-ಹಂತವಾಗಿ 30.99 ಲಕ್ಷ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ಹಾಕಿಸಿಕೊಂಡು ತನಿಖೆ ಮುಗಿದ ನಂತರ ಮರಳಿ ಕೊಡುವುದಾಗಿ ನಂಬಿಸಿದ್ದರು.

ಹಣ ವಾಪಾಸ್‌ ಸಿಗದಿದ್ದಾಗ ಗುಂಡಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ