ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಅಪರಾಧಿಗಳು ತಾವು ಕಾನೂನು ಜಾರಿ ಅಧಿಕಾರಿಗಳೆಂದು ಹೇಳಿಕೊಂಡು ಕಳೆದ ಮೂರು ತಿಂಗಳಲ್ಲಿ 42 ಬಾರಿ, ಒಟ್ಟು 7.67 ಕೋಟಿ ರೂ. ಸುಲಿಗೆ ಮಾಡಿರುವ ಪ್ರಮುಖ ‘ಡಿಜಿಟಲ್ ಅರೆಸ್ಟ್’ ಪ್ರಕರಣದಲ್ಲಿ ನಾಲ್ವರು ಕಿಂಗ್‌ಪಿನ್‌ಗಳನ್ನು ಬಂಧಿಸಿರುವುದಾಗಿ ಕೇಂದ್ರ ತನಿಖಾ ಸಂಸ್ಥೆ ಮಂಗಳವಾರ ತಿಳಿಸಿದೆ.
ಮೂಲತಃ ರಾಜಸ್ಥಾನದ ಜುನ್‌ಜುನುವಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ರಾಜಸ್ಥಾನ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐ ತನಿಖೆ ನಡೆಸುತ್ತಿದೆ. ವಿವಿಧ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳಂತೆ ನಟಿಸಿ, ಹಲವು ಜನರನ್ನು ಡಿಜಿಟಲ್ ಅರೆಸ್ಟ್ ಮಾಡಿ, ಹಣ ಸುಲಿಗೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬಿಐ ನಡೆಸುತ್ತಿರುವ ಆಪರೇಷನ್ ಚಕ್ರ-ವಿ ಕಾರ್ಯಾಚರಣೆಯ ಭಾಗವಾಗಿ ಮುಂಬೈ ಮತ್ತು ಮೊರಾದಾಬಾದ್‌ನಿಂದ ತಲಾ ಇಬ್ಬರನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಸಂಭಾಲ್, ಮಹಾರಾಷ್ಟ್ರದ ಮುಂಬೈ, ರಾಜಸ್ಥಾನದ ಜೈಪುರ ಮತ್ತು ಪಶ್ಚಿಮ ಬಂಗಾಳದ ಕೃಷ್ಣನಗರ ಸೇರಿದಂತೆ ದೇಶಾದ್ಯಂತ 12 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿ, ಫಾಲೋ-ಅಪ್ ಶೋಧ ಕಾರ್ಯಾಚರಣೆ ನಡೆಸಿತು.