ಹೊಸದಿಗಂತ ಬೆಳಗಾವಿ:
‘ಡಿಜಿಟಲ್ ಅರೆಸ್ಟ್’ ಹೆಸರಲ್ಲಿ ನಗರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ 15.45 ಕೋಟಿ ರೂಪಾಯಿ ವಂಚಿಸಿದ್ದ ಇಬ್ಬರು ವಂಚಕರನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬೆಳಗಾವಿಯ ಉದ್ಯಮಿ ಅಜಿತ್ ಗೋಪಾಲಕೃಷ್ಣ ಅವರಿಗೆ ಫೆಬ್ರವರಿ 7 ರಿಂದ ಮಾರ್ಚ್ 9 ರವರೆಗೆ ವಂಚಕರು ‘ಡಿಜಿಟಲ್ ಅರೆಸ್ಟ್’ ಎಂಬ ಮಾಯಾಜಾಲದಲ್ಲಿ ಸಿಲುಕಿಸಿದ್ದರು. ಯಾವುದೋ ಕ್ರಿಮಿನಲ್ ಪ್ರಕರಣದಲ್ಲಿ ನಿಮ್ಮ ಹೆಸರಿದೆ ಎಂದು ಹೆದರಿಸಿ, ಸುಮಾರು ಒಂದು ತಿಂಗಳ ಕಾಲ ಅವರನ್ನು ಮನೆಯಲ್ಲೇ ಇರುವಂತೆ ಒತ್ತಾಯಿಸಿದ್ದರು. ಈ ಅವಧಿಯಲ್ಲಿ ಹಂತ ಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 15.45 ಕೋಟಿ ರೂಪಾಯಿಗಳನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುವಲ್ಲಿ ವಂಚಕರು ಯಶಸ್ವಿಯಾಗಿದ್ದರು.
ವಂಚನೆಗೊಳಗಾದ ಉದ್ಯಮಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಸೈಬರ್ ಕಮಾಂಡ್ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದರು. ತಾಂತ್ರಿಕ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವೆಂಕದೋತ ಶರತ್ ನಾಯಕ್ ಮತ್ತು ದೇಗಾವತ ಶ್ರೀಪಾದ ನಾಯಕ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸದ್ಯ 2 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದ್ದು, ಉಳಿದ ಹಣದ ಪತ್ತೆಗಾಗಿ ಮತ್ತು ಈ ಜಾಲದಲ್ಲಿ ಇನ್ನೂ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



