April 8, 2026
Wednesday, April 8, 2026
spot_img

ಕಂದಾಯ ಇಲಾಖೆಯಲ್ಲಿ ಡಿಜಿಟಲ್ ಕ್ರಾಂತಿ: ನೋಂದಣಿಯಾದ್ರೆ ಸಾಕು, ಕೈ ಸೇರುತ್ತೆ ಖಾತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ತಿ ಖರೀದಿ ಮಾಡಿದ ನಂತರ ಖಾತೆ ಮಾಡಿಸಿಕೊಳ್ಳಲು ಕಚೇರಿಗಳಿಗೆ ಅಲೆಯುವ ಕಾಲ ಇನ್ನು ಇತಿಹಾಸ. ಆಸ್ತಿ ನೋಂದಣಿಯಾದ ತಕ್ಷಣ ಸ್ವಯಂಚಾಲಿತವಾಗಿ ಖಾತೆ ಬದಲಾವಣೆಯಾಗುವ ‘ಆಟೋ ಮ್ಯುಟೇಶನ್’ ವ್ಯವಸ್ಥೆ ರಾಜ್ಯದಲ್ಲಿ ಭರ್ಜರಿಯಾಗಿ ಜಾರಿಯಾಗಿದ್ದು, ಪ್ರಸ್ತುತ ಶೇ. 98ರಷ್ಟು ಪ್ರಕರಣಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ರಾಮೋಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸುಧಾರಣೆಯ ಕುರಿತು ಮಹತ್ವದ ಅಂಶಗಳನ್ನು ಹಂಚಿಕೊಂಡರು.

ಯಾರನ್ನೂ ಭೇಟಿ ಮಾಡುವ ಅಗತ್ಯವಿಲ್ಲದೆ, ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಖಾತೆ ಬದಲಾವಣೆಯಾಗುತ್ತಿದೆ. ಇದು ದೇಶದಲ್ಲೇ ಒಂದು ಪ್ರಗತಿಪರ ಹೆಜ್ಜೆ. ಕಳೆದ ವರ್ಷ ಶೇ. 66ರಷ್ಟಿದ್ದ ಆಟೋ ಮ್ಯುಟೇಶನ್ ಪ್ರಮಾಣವನ್ನು, ಕಳೆದ ತಿಂಗಳಿನಿಂದ ಶೇ. 98ಕ್ಕೆ ಹೆಚ್ಚಿಸಲಾಗಿದೆ.

ಕೆಲವು ಅರ್ಜಿಗಳು ಸಲ್ಲಿಕೆಯಾದ 3 ಗಂಟೆಯಲ್ಲೇ ವಿಲೇವಾರಿಯಾದರೆ, ಇನ್ನು ಕೆಲವು ನಿಯಮಾನುಸಾರ 8 ಅಥವಾ 16ನೇ ದಿನಕ್ಕೆ ಖಾತೆ ಬದಲಾವಣೆಯಾಗುತ್ತವೆ.

ಒಂದು ವೇಳೆ ಆಸ್ತಿ ಸಂಬಂಧ ಕಾನೂನು ತಕರಾರುಗಳು ದಾಖಲಾದರೆ ಮಾತ್ರ ಪ್ರಕ್ರಿಯೆ ವಿಳಂಬವಾಗುತ್ತದೆ, ಉಳಿದಂತೆ ಎಲ್ಲವೂ ಡಿಜಿಟಲ್ ವೇಗದಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !