ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತೊಮ್ಮೆ ನಿರಾಕರಿಸಿದ್ದಾರೆ.
ನೆದರ್ಲ್ಯಾಂಡ್ಸ್ ಮೂಲದ ಸುದ್ದಿ ಚಾನೆಲ್ NOS ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಈ ವಿಷಯವಾಗಿ ಭಾರತ ಹಲವು ವೇದಿಕೆಗಳಲ್ಲಿ ಸ್ಪಷ್ಟನೆ ನೀಡಿದೆ. ಅಮೆರಿಕಾ ಕಾರಣಕ್ಕಾಗಿಯೇ ಭಾರತ- ಪಾಕ್ ನಡುವಿನ ಕದನ ವಿರಾಮ ಘೋಷಣೆಯಾಗಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಭಾರತ ಮತ್ತು ಪಾಕಿಸ್ತಾನ ನೇರವಾಗಿ ಮಾತುಕತೆ ಮೂಲಕ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಗುಂಡಿನ ದಾಳಿಯನ್ನು ನಿಲ್ಲಿಸಬೇಕಾದರೆ ಪಾಕಿಸ್ತಾನ ಭಾರತದ ಜನರಲ್ಗೆ ಕರೆ ಮಾಡಿ ಹೇಳಬೇಕು ಎಂದು ಅಮೆರಿಕ ಸೇರಿದಂತೆ ಪ್ರತಿಯೊಂದು ರಾಷ್ಟ್ರಕ್ಕೂ ಭಾರತ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.
ಎರಡು ರಾಷ್ಟ್ರಗಳು ಸಂಘರ್ಷದಲ್ಲಿ ತೊಡಗಿರುವಾಗ ರಾಷ್ಟ್ರಗಳು ಕರೆ ಮಾಡುವುದು ಸಹಜ . ಅದೇ ರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ನನ್ನೊಂದಿಗೆ ಮಾತನಾಡಿದರು, ಮತ್ತು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು ಎಂದು ಜೈಶಂಕರ್ ಹೇಳಿದ್ದಾರೆ.
ಎರಡು ದೇಶಗಳು ಸಂಘರ್ಷದಲ್ಲಿ ತೊಡಗಿರುವಾಗ, ವಿಶ್ವದ ದೇಶಗಳು ಕರೆ ಮಾಡಿ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿ ಅಂತಹ ಪರಿಸ್ಥಿತಿಯಲ್ಲಿ ಅವರು ಏನು ಮಾಡಬಹುದು ಎಂಬುದನ್ನು ಸೂಚಿಸುವುದು ಸಹಜ. ಆದರೆ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದು ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾಗಿ ಮಾತುಕತೆ ನಡೆದ ವಿಷಯವಾಗಿತ್ತು. ನಮ್ಮೊಂದಿಗೆ ಮಾತನಾಡಿದ ಪ್ರತಿಯೊಬ್ಬರಿಗೂ, ಅಮೆರಿಕಕ್ಕೆ ಮಾತ್ರವಲ್ಲದೆ ಎಲ್ಲರಿಗೂ ನಾವು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದೇವೆ. ಪಾಕಿಸ್ತಾನಿಗಳು ಗುಂಡಿನ ದಾಳಿಯನ್ನು ನಿಲ್ಲಿಸಲು ಬಯಸಿದರೆ, ಅವರು ನಮಗೆ ಹೇಳಬೇಕು, ನಾವು ಅದನ್ನು ಅವರಿಂದ ಕೇಳಬೇಕು, ಅವರ ಜನರಲ್ ನಮ್ಮ ಜನರಲ್ಗೆ ಕರೆ ಮಾಡಿ ಹೀಗೆ ಹೇಳಬೇಕು ಎಂದು ಹೇಳಿದ್ದೆವು, ಮತ್ತು ಅದು ಸಂಭವಿಸಿತು ಎಂದು ಅವರು ಹೇಳಿದ್ದಾರೆ.