ಅರವಿಂದ್ ಕೇಜ್ರಿವಾಲ್ ಗೆ ನಿರಾಸೆ: ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಹೈಕೋರ್ಟ್ ಆದೇಶದವರೆಗೂ ಕಾಯುವಂತೆ ನ್ಯಾ. ಮನೋಜ್ ಮಿಶ್ರಾ ನೇತೃತ್ವದ ದ್ವಿ ಸದಸ್ಯ ಪೀಠ ಸೂಚಿಸಿದೆ.

ರೋಸ್ ಅವೆನ್ಯೂ ಕೋರ್ಟ್ ನೀಡಿದ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶಕ್ಕಾಗಿ ಕಾಯದೇ ಹೈಕೋರ್ಟ್ ಆದೇಶವನ್ನು ನೋಡದೆ ತಡೆಹಿಡಿಯಬಹುದಾದರೆ, ನಿಮ್ಮ ಹೈಕೋರ್ಟ್ ಆದೇಶವನ್ನು ಏಕೆ ತಡೆಹಿಡಿಯಬಾರದು ಎಂದು ಪ್ರಶ್ನಿಸಿದರು‌.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಮನೋಜ್ ಮಿಶ್ರಾ, ಹೈಕೋರ್ಟ್ ತಪ್ಪು ಮಾಡಿದ್ದರೆ ಅದನ್ನು ಪುನರಾವರ್ತಿಸಬೇಕೇ? ಎಂದು ಮರು ಪ್ರಶ್ನಿಸಿತು.

ನಾವು ಈಗ ಆದೇಶವನ್ನು ನೀಡಿದರೆ ಸಮಸ್ಯೆಯಾಗಬಹುದು ಒಂದು ದಿನ ಕಾಯುವುದರಲ್ಲಿ ಏನು ಸಮಸ್ಯೆ ಎಂದು ಪೀಠ ಕೇಳಿತು. ಈ ವೇಳೆ ಕೇಜ್ರಿವಾಲ್ ಪರ ವಾದ ಮಂಡಿಸಿದ ಮತ್ತೋರ್ವ ಹಿರಿಯ ವಕೀಲ ವಿಕ್ರಮ್ ಚೌಧರಿ, ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಸುಪ್ರೀಂ ಕೋರ್ಟ್‌ನ ಮೇ 10 ರ ಆದೇಶವನ್ನು ಉಲ್ಲೇಖಿಸಿದರು. ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿಯೂ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ, ತನಿಖೆಯ ದಿಕ್ಕು ತಪ್ಪಿಸಿಲ್ಲ, ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಿಲ್ಲ ಎಂದರು.

ಇಡಿ ಪರ ವಕೀಲ ಎಎಸ್‌ಜಿ ರಾಜು ಪ್ರತಿವಾದ ಮಂಡಿಸಿ, ವಿಚಾರಣಾ ನ್ಯಾಯಾಲಯದ ಜಾಮೀನು ಆದೇಶ ವಿಕೃತವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ಈ ಪ್ರಕರಣದಲ್ಲಿ ಹೈಕೋರ್ಟ್ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ, ಒಂದೇರೆಡು ದಿನಗಳು ಕಾಯಿರಿ, ಈ ಮಧ್ಯೆ ಹೈಕೋರ್ಟ್‌ನ ಆದೇಶ ಜಾರಿಯಾದರೆ ಅದನ್ನು ದಾಖಲೆಗೆ ತರಬಹುದು ಎಂದೂ ಹೇಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!