ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬದ ಪ್ರಯಾಣ ದಟ್ಟಣೆ ನಿಯಂತ್ರಿಸಲು ಮತ್ತು ಬುಕ್ಕಿಂಗ್ ಪ್ರಕ್ರಿಯೆ ಸುಗಮಗೊಳಿಸಲು ಭಾರತೀಯ ರೈಲ್ವೇ ವಿಶೇಷ ರೌಂಡ್ ಟ್ರಿಪ್ ಪ್ಯಾಕೇಜ್ ಪರಿಚಯಿಸಿದೆ. ಈ ಯೋಜನೆಯಡಿ, ಪ್ರಯಾಣಿಕರು ಹೋಗುವ ಹಾಗೂ ಹಿಂದಿರುಗುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದಲ್ಲಿ ಹಿಂದಿರುಗುವ ಟಿಕೆಟ್ ದರದಲ್ಲಿ 20% ರಿಯಾಯಿತಿ ಲಭ್ಯವಾಗಲಿದೆ.
ಯೋಜನೆಯ ಮುಖ್ಯ ನಿಯಮಗಳು
ರಿಯಾಯಿತಿ ಕೇವಲ ನಿಗದಿತ ಅವಧಿಯೊಳಗೆ ವಾಪಸ್ಸಿನ ದಿನಾಂಕವನ್ನು ಆಯ್ಕೆ ಮಾಡಿದ ಪ್ರಯಾಣಿಕರಿಗೆ ಮಾತ್ರ ಅನ್ವಯಿಸುತ್ತದೆ.
ಹೋಗುವ ಹಾಗೂ ಹಿಂದಿರುಗುವ ಪ್ರಯಾಣದ ಪ್ರಯಾಣಿಕರ ವಿವರಗಳು ಒಂದೇ ಆಗಿರಬೇಕು.
ಎರಡೂ ಟಿಕೆಟ್‌ಗಳು ಒಂದೇ ದರ್ಜೆಯ (ಕ್ಲಾಸ್) ಪ್ರಯಾಣಕ್ಕೆ ಇರಬೇಕು.
ರಿಯಾಯಿತಿ ಕೇವಲ ಹಿಂದಿರುಗುವ ಪ್ರಯಾಣದ ಮೂಲ ದರಕ್ಕೆ ಮಾತ್ರ ಅನ್ವಯಿಸುತ್ತದೆ.
ಬುಕ್ ಮಾಡಿದ ನಂತರ ಟಿಕೆಟ್ ಬದಲಾವಣೆ ಅಥವಾ ರದ್ದುಪಡಿಸಲು ಅವಕಾಶ ಇಲ್ಲ.
ಕೂಪನ್, ವೋಚರ್, ಪಾಸ್ ಅಥವಾ ಪಿಟಿಒಗಳಂತಹ ಇತರ ರಿಯಾಯಿತಿಗಳೊಂದಿಗೆ ಈ ಆಫರ್ ಬಳಸಲು ಅವಕಾಶವಿಲ್ಲ.
ಹೋಗುವ ಹಾಗೂ ಹಿಂದಿರುಗುವ ಟಿಕೆಟ್‌ಗಳನ್ನು ಒಂದೇ ಮೋಡ್ ಮೂಲಕ (ಆನ್‌ಲೈನ್ ಅಥವಾ ಕೌಂಟರ್) ಬುಕ್ ಮಾಡಬೇಕು.
ಯಾವ ರೈಲುಗಳಿಗೆ ಅನ್ವಯಿಸುವುದಿಲ್ಲ
ರಾಜಧಾನಿ, ಶತಾಬ್ದಿ, ಡುರಾಂಟೊ ಮತ್ತು ಫ್ಲೆಕ್ಸಿ ದರ ರೈಲುಗಳಿಗೆ ಈ ರಿಯಾಯಿತಿ ಅನ್ವಯಿಸುವುದಿಲ್ಲ.
ಟಿಕೆಟ್ ಬುಕ್ಕಿಂಗ್ ಅವಧಿ
ಆಗಸ್ಟ್ 14ರಿಂದ ಅಕ್ಟೋಬರ್ 13ರೊಳಗೆ ಆರಂಭವಾದ ಪ್ರಯಾಣಗಳಿಗೆ ಮತ್ತು ನವೆಂಬರ್ 17ರಿಂದ ಡಿಸೆಂಬರ್ 1ರೊಳಗಿನ ವಾಪಸ್ಸಿನ ದಿನಾಂಕಗಳಿಗೆ ಈ ಯೋಜನೆ ಅನ್ವಯಿಸುತ್ತದೆ.
ಅಕ್ಟೋಬರ್ 13ರಿಂದ 26ರೊಳಗಿನ ವಾಪಸ್ಸಿನ ದಿನಾಂಕಗಳಿಗೆ ರಿಯಾಯಿತಿ ಲಭ್ಯವಿರುವುದಿಲ್ಲ.
60 ದಿನಗಳ ಮುಂಗಡ ಬುಕ್ಕಿಂಗ್ ನಿಯಮ ಈ ಯೋಜನೆಗೆ ಅನ್ವಯಿಸುವುದಿಲ್ಲ.