ಹೊಸದಿಗಂತ ಡಿಜಿಟಲ್ ಡೆಸ್ಕ್:
I.N.D.I.A ಮೈತ್ರಿಕೂಟದಲ್ಲಿ ಮತ್ತೊಮ್ಮೆ ಅಸಮಾಧಾನ ಭುಗಿಲೆದ್ದಿದೆ. ಇತ್ತೀಚೆಗೆ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ (ಎನ್ಸಿಪಿ) ನಾಯಕ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಕೂಟದಲ್ಲಿ ‘ಸಮನ್ವಯದ ಕೊರತೆ’ ಇದೆ ಎಂದು ಟೀಕಿಸಿದ್ದರು. ಇದೀಗ ಮತ್ತೊಂದು ಮಿತ್ರಪಕ್ಷ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಕೂಡ ಅದೇ ರಾಗ ಹಾಡಿದೆ.
ಇಂಡಿಯಾ ಕೂಟಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಸ್ಥರಾಗಿದ್ದಾರೆ. ಕೂಟವು ಈ ನಡುವೆ ಯಾವುದೇ ಸಭೆ ನಡೆಸಿಲ್ಲ. ಇದರಿಂದ ಸಮನ್ವಯದ ಕೊರತೆಯಿದೆ. ಎಲ್ಲ ಪಕ್ಷಗಳು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಿಪಿಐ ಮನವಿ ಮಾಡುತ್ತದೆ. ಹರಿಯಾಣ, ಮಹಾರಾಷ್ಟ್ರ ಮತ್ತು ಬಿಹಾರ ಚುನಾವಣೆಗಳಿಂದ ಪಾಠ ಕಲಿಯಬೇಕಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಹೇಳಿದ್ದಾರೆ.
ಬಿಹಾರ ಚುನಾವಣೆಯ ಹೀನಾಯ ಸೋಲನ್ನು ಕೂಟದ ನ್ಯೂನತೆಗಳ ಉದಾಹರಣೆಯಾಗಿ ನೀಡಿದ ರಾಜಾ ಅವರು, ‘ಬಿಹಾರದಲ್ಲಿ ಸೂಕ್ತ ಸೀಟು ಹಂಚಿಕೆ, ಜಂಟಿ ಪ್ರಚಾರ, ಪಕ್ಷಗಳ ನಡುವೆ ಸಮನ್ವಯ ಇರಲಿಲ್ಲ. ಈ ಕುರಿತು ನಾವು ಗಂಭೀರವಾಗಿ ಚಿಂತಿಸಬೇಕು. ಒಮರ್ ಅಬ್ದುಲ್ಲಾ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಲಹೆ ನೀಡಿದ್ದಾರೆ.

