ಕಾರ್ಕಳದಲ್ಲಿ ಭಿನ್ನಮತ ಸ್ಫೋಟ: ಟಿಕೆಟ್ ಆಕಾಂಕ್ಷಿ ಮಂಜುನಾಥ ಪೂಜಾರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾರ್ಕಳ ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಭಿನ್ನಮತ ಸ್ಫೋಟವಾಗಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ರಾಡಿ ಮಂಜುನಾಥ ಪೂಜಾರಿ ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಟಿಕೆಟ್ ಕೈತಪ್ಪಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಅವರು, ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಬದಲಾವಣೆಯ ನಿರೀಕ್ಷೆ ಮಾಡಿದ್ದೆವು. ಆದರೆ ಅವರು ಆಡಿದ್ದೇ ಬೇರೆ ಮಾಡಿದ್ದೇ ಬೇರೆ. ಪಕ್ಷ ಕಟ್ಟಿದವರ ಅವಗಣನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಒಬ್ಬರೇ ಒಬ್ಬ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಟಿಕೆಟ್ ಮಾರಾಟ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅವನತಿಗೆ ಡಿಕೆ ಶಿವಕುಮಾರ್ ಕಾರಣ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅವನತಿಗೆ ವಿನಯ್ ಕುಮಾರ್ ಸೊರಕೆ ಕಾರಣ. ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕುತ್ತಿದ್ದರೂ ಸೊರಕೆಯಂತವರಿಗೆ ಮತ್ತೆ ಮತ್ತೆ ಅವಕಾಶ ಯಾಕೆ ಕೊಡುತ್ತಿದ್ದಾರೆ ಎಂದರು.

ಪಕ್ಷಕ್ಕಾಗಿ ನಾನು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದೇನೆ. ಟಕೆಟ್ ಹಂಚಿಕೆಯಲ್ಲಿ ಜಾತಿ ಆಧಾರ ನೋಡದೆ ಪಕ್ಷ ಸಂಘಟನೆ ಮಾಡಿದವರಿಗೆ ಅವಕಾಶ ಕಲ್ಪಿಸಬೇಕು ಎಂದ ಅವರು, ನನ್ನ ಮತ ಕಾಂಗ್ರೆಸ್ ಗೆ. ಆದರೆ ಪ್ರಚಾರಕ್ಕೆ ಹೋಗುವುದಿಲ್ಲ. ತತ್ವ ಸಿದ್ದಾಂತದ ಮೇಳೆ ಬದುಕುತ್ತಿದ್ದೇನೆ, ಪಕ್ಷದಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!