ಹೊಸದಿಗಂತ ವರದಿ ಮಡಿಕೇರಿ :
ನೂತನ ಪೊನ್ನಂಪೇಟೆ ತಾಲೂಕು ರಚನೆಯಾದ ಬಳಿಕ ಮೊದಲನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗೋಣಿಕೊಪ್ಪದಲ್ಲಿ ಆಚರಿಸುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಚಾರ.
ಇದನ್ನು ಅಭೂತಪೂರ್ವಾಗಿ ನಡೆಸಬೇಕು, ಸರಕಾರ ಈ ಸಮ್ಮೇಳನಕ್ಕೆ 5 ಲಕ್ಷ ರೂ. ಅನುದಾನ ನೀಡುತ್ತಿದ್ದು, ಉಳಿದಂತೆ ಸಂಪನ್ಮೂಲಗಳನ್ನು ಸಂಗ್ರಹಿಸಿ ಅಚ್ಚುಕಟ್ಟಾದ ಸಮ್ಮೇಳನವನ್ನು ಆಯೋಜಿಸಬೇಕು ಎಂದು ಶಾಸಕ ಕೆ ಜಿ ಬೋಪಯ್ಯ ಅಭಿಪ್ರಾಯಪಟ್ಟರು.
ಗೋಣಿಕೊಪ್ಪದಲ್ಲಿ ನಡೆದ ಜಿಲ್ಲಾ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಈಗಾಗಲೇ ಜಿಲ್ಲಾ ಕಾರ್ಯಕಾರಿ ಸಭೆಯಲ್ಲಿ ಗೋಣಿಕೊಪ್ಪಲಿನಲ್ಲಿ ಈ ಬಾರಿ 16ನೇ ಸಾಹಿತ್ಯ ಸಮ್ಮೇಳನವನ್ನು ಸ್ಥಳೀಯರ ಸಹಕಾರದೊಂದಿಗೆ ನಡೆಸುವಂತೆ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಈ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಈ ಊರಿನ ಜನರು ಅಭೂತಪೂರ್ವಾಗಿ ನಡೆಸಿಕೊಟ್ಟಿದ್ದನ್ನು ನೆನಪಿಸಿಕೊಳ್ಳಲೇಬೇಕಾಗಿದೆ. ಈ ಬಾರಿಯೂ ಗೋಣಿಕೊಪ್ಪಲಿನ ಸಹೃದಯಿ ಕನ್ನಡಿಗರು, ಸಂಘ-ಸಂಸ್ಥೆಗಳ ಪ್ರಮುಖರು, ತಾಲೂಕಿನ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಆಡಳಿತ ಮಂಡಳಿ, ವಿದ್ಯಾರ್ಥಿಗಳು, ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು, ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು, ಆಟೋ ಮತ್ತು ವಾಹನ ಚಾಲಕರ ಮಾಲಕರ ಸಂಘಗಳ ಸದಸ್ಯರು, ಸ್ತ್ರೀ ಶಕ್ತಿ ಒಕ್ಕೂಟ, ಸಂಜೀವಿನಿ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯರು ಮತ್ತು ಯುವಕ ಯುವತಿ ಮಂಡಳಿಗಳ ಸದಸ್ಯರು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಜಿಲ್ಲಾ ಸಮ್ಮೇಳನವನ್ನು ಗೋಣಿಕೊಪ್ಪಲಿನಲ್ಲಿ ನಡೆಸಲು ಆಯೋಜಿಸಿದ್ದು ಊರಿನ ಪ್ರಮುಖರು ಒಪ್ಪಿಗೆ ನೀಡಬೇಕೆಂದು ಕೋರಿದರು.
ನೆರೆದ ಸಭಿಕರು ಕರತಾಡನ ಮಾಡುವ ಮೂಲಕ ಕಾರ್ಯಕ್ರಮವನ್ನು ಗೋಣಿಕೊಪ್ಪಲಿನಲ್ಲಿ ನಡೆಸಲು ಸಹಕಾರ ನೀಡುವ ಕುರಿತು ಒಪ್ಪಿಗೆ ನೀಡಿದರು. ಮಾರ್ಚ್ ತಿಂಗಳ 4 ಮತ್ತು 5 ರಂದು ಗೋಣಿಕೊಪ್ಪದ ಸರಕಾರಿ ಶಾಲಾ ಮೈದಾನದಲ್ಲಿ ಸಮ್ಮೇಳನ ನಡೆಸುವಂತೆ ತೀರ್ಮಾನಿಸಲಾಯಿತು.
ಹದಿನಾರನೇ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಉಸ್ತುವಾರಿ ಸಚಿವ ಬಿ.ಸಿ ನಾಗೇಶ್, ಶಾಸಕ ಎಂ.ಪಿ.ಅಪ್ಪಚುರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ ಸುಜಾ ಕುಶಾಲಪ್ಪ, ಕಾರ್ಯಾಧ್ಯಕ್ಷರಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೇರ ದಯಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನೀರ್ ಅಹಮದ್, ಪುದಿಯನೆರವನ ರೇವತಿ ರಮೇಶ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ, ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ಲು ನವೀನ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್ ಡಿ ವಿಜೇತ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ ಅವರನ್ನು ಆರಿಸಲಾಯಿತು.
ಜಿಲ್ಲಾ ಸಹ ಕಾರ್ಯದರ್ಶಿಗಳಾದ ಕುಮಾರ್, ಡೆನ್ನಿಸ್ ಡಿಸೋಜ, ಸಂಘಟನಾ ಕಾರ್ಯದರ್ಶಿಗಳಾದ ಎಂ ಇ. ಮೊಹಿದ್ದೀನ್, ಆರ್.ಪಿ ಚಂದ್ರಶೇಖರ್ ಮತ್ತು ಹೋಬಳಿ ಅಧ್ಯಕ್ಷರುಗಳನ್ನು ಕಾರ್ಯದರ್ಶಿಗಳಾಗಿ ಆರಿಸಲಾಯಿತು. ಕೋಶಾಧಿಕಾರಿಯಾಗಿ ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಮತ್ತು ಜಿಲ್ಲಾ ಕೋಶಾಧಿಕಾರಿ ಎಂ.ಬಿ ಜೋಯಪ್ಪ , ಮಹಾಪೋಷಕರುಗಳಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮತ್ತು ಪೋಷಕರುಗಳಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಆರಿಸಲಾಯಿತು. ಕಾರ್ಯಕ್ರಮದ ಅಚ್ಚುಕಟ್ಟು ಮತ್ತು ಯಶಸ್ಸಿಗೆ ಅನುಕೂಲವಾಗುವಂತೆ ಹಲವಾರು ಸಮಿತಿಗಳನ್ನು ರಚಿಸಲಾಯಿತು. ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿ ಅಭಿಪ್ರಾಯ ನೀಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ, ಸಮ್ಮೇಳನವನ್ನು ಆಯೋಜಿಸುವ ಸಂದರ್ಭದಲ್ಲಿ ಕೇವಲ ವಿಜೃಂಭಣೆಯ ಕಡೆಗೆ ಗಮನ ನೀಡದೆ ಈ ನಾಡಿಗೆ ಸೇವೆ ಸಲ್ಲಿಸಿ ತ್ಯಾಗ, ಆದರ್ಶ, ಸಮಾಜಮುಖಿ ಸೇವೆ ಸಲ್ಲಿಸಿ ಗತಿಸಿದ ಹಿರಿಯರ ಹೆಸರಿನಲ್ಲಿ ದ್ವಾರಗಳ ನಿರ್ಮಾಣ ಮಾಡುವ ಮೂಲಕ ಮತ್ತು ಸಾಹಿತ್ಯಿಕವಾಗಿ ಸೇವೆ ಸಲ್ಲಿಸಿದವರ ನೆನಪಿನಲ್ಲಿ ಪುಸ್ತಕ ಮಳಿಗೆ, ಸಭಾಂಗಣ, ವೇದಿಕೆಗಳನ್ನು ನಿರ್ಮಿಸುವ ಮೂಲಕ ಗತಿಸಿಹೋದ ಹಿರಿಯರನ್ನು ಮುಂದಿನ ಪೀಳಿಗೆಗೆ ನೆನಪಿಸಿಕೊಡಬೇಕಾದ ಅಗತ್ಯತೆ ಇದೆ. ಅಲ್ಲದೆ ಸಮ್ಮೇಳನದ ನೆನಪಿನಲ್ಲಿ ಹೊರ ತರುವ ಸ್ಮರಣ ಸಂಚಿಕೆಯಲ್ಲಿ ಇವೆಲ್ಲವನ್ನೂ ದಾಖಲಿಸುವ ಮೂಲಕ ಸ್ಮರಣ ಸಂಚಿಕೆಯನ್ನು ಒಂದು ಸಂಗ್ರಹ ಯೋಗ್ಯ ಪುಸ್ತಕ ಮಾಡುವ ಜವಾಬ್ದಾರಿ ಕೂಡಾ ಎಲ್ಲರ ಮೇಲಿದೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದ ಸಂಚಾಲಕ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ತಾಲೂಕು ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯ ಬಾಲು, ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಪೊನ್ನಂಪೆಟೆ ಹೋಬಳಿ ಕಸಾಪ ಮಾಜಿ ಅಧ್ಯಕ್ಷ ಬಿ.ಎನ್.ಪ್ರಕಾಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಸಹಕಾರ್ಯದರ್ಶಿಗಳಾದ ಕುಮಾರ್, ಡೆನ್ನಿಸ್ ಡಿಸೋಜಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಇ. ಮೊಹಿದ್ದೀನ್, ಪೊನ್ನಂಪೇಟೆ ತಾಲೂಕು ಕಸಾಪ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ರಾಜೇಶ್ ಪದ್ಮನಾಭ, ಪೊನ್ನಂಪೇಟೆ ಹೋಬಳಿ ಕಸಾಪ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಹುದಿಕೇರಿ ಹೋಬಳಿ ಅಧ್ಯಕ್ಷ ಬಾನಂಗಡ ಅರುಣ್, ಬಾಳೆಲೆ ಹೋಬಳಿ ಅಧ್ಯಕ್ಷ ಪಡಿಞಾರಂಡ ಪ್ರಭು ಕುಮಾರ್, ತಾಲೂಕು ಕಾರ್ಯದರ್ಶಿ ಶೀಲಾ ಬೋಪಣ್ಣ, ಮತ್ತು ಕೆ.ವಿ. ರಾಮಕೃಷ್ಣ, ಕೋಶಾಧಿಕಾರಿ ಪಿ.ಜಿ ರಾಜಶೇಖರ್ ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.