ಭಗವಾನ್ ಥರದವರ ಹಣದ ಮೂಲ ಪರಿಶೀಲಿಸಿ – ಎಸ್ಪಿಗೆ ಜಿಲ್ಲಾ ಬಿಜೆಪಿ ದೂರು

ಹೊಸದಿಗಂತ ವರದಿ ಮಂಡ್ಯ:

ಪುರಾಣ ಪುರುಷರಾದ ಶ್ರೀರಾಮ, ಸೀತಾಮಾತೆ ಹಾಗೂ ಇತ್ತೀಚೆಗೆ ಕೃಷಿಕ ಸಮುದಾಯವಾದ ಒಕ್ಕಲಿಗ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿರುವ ಪ್ರೊ. ಭಗವಾನ್ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದರ ಜೊತೆಗೆ ಇವರು ನಡೆಸುತ್ತಿರುವ ಸಂಘ ಸಂಸ್ಥೆಗಳಿಗೆ ವಿದೇಶಗಳಿಂದ ಹರಿದುಬರುತ್ತಿರುವ ಹಣದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಇತರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ಇತ್ತೀಚೆಗೆ ಮೈಸೂರಿನ ಟೌನ್‌ಹಾಲ್ ಬಳಿ ಮಹಿಷ ದಸರಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ವೇದಿಕೆಯಲ್ಲಿ ಸಾರ್ವಜನಿಕವಾಗಿ ಒಕ್ಕಲಿಗರು ಸಂಸ್ಕೃತಿ ಹೀನರು ಹಾಗೂ ಪ್ರಾಣಿಗಳು ಎಂಬ ಮಾತುಗಳನ್ನಾಡಿ ಸಾರ್ವತ್ರಿಕವಾಗಿ ಅಪಮಾನ ಮಾಡಿದ್ದಾರೆ. ಈ ಹಿಂದೆಯೂ ಧರ್ಮದ ಬಗ್ಗೆ ಹಾಗೂ ಇತಿಹಾಸ ಪುಣ್ಯ ಪುರುಷರಾದ ಶ್ರೀರಾಮ, ಸೀತಾದೇವಿ, ಭಗವದ್ಗೀತೆಯ ಬಗ್ಗೆ ತೀರಾ ಹಗುರವಾದ ಮಾತನಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದರ ಹಿಂದೆ ಅಂತಾರಾಷ್ಟ್ರೀಯ ಹುನ್ನಾರವಿದ್ದು, ಡಿಸ್‌ಮ್ಯಾಂಟಲಿಂಗ್ ಆಫ್ ಗ್ಲೋಬಲ್ ಹಿಂದುತ್ವ ಎಂಬ ವೀಡಿಯೋ ಸಂವಾದವನ್ನು ವಿದೇಶಿ ವಿದ್ಯಾಲಯಗಳು ಏರ್ಪಡಿಸಿದ್ದು, ಭಾರತದಿಂದ ಸಹಸ್ರಾರು ಜನ ತಮ್ಮನ್ನು ತಾವು ಬುದ್ಧಿಜೀವಿಗಳು ಎಂದು ಕರೆದುಕೊಳ್ಳುವ ಪ್ರಾಧ್ಯಾಪಕರು, ಸಾಹಿತಿಗಳು, ಇತಿಹಾಸ ತಜ್ಞರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿರುವ ಬಗ್ಗೆ ವಿದೇಶಿ ಮಾಧಮಗಳಲ್ಲಿ ವರದಿಯಾಗಿವೆ ಎಂದು ತಿಳಿಸಿದ್ದಾರೆ.

ಈ ಸಂವಾದದಲ್ಲಿ ಪ್ರೊ. ಭಗವಾನ್, ಪ್ರೊ. ಮಹೇಶ್ ಚಂದ್ರಗುರು, ಜ್ಞಾನಪ್ರಕಾಶ್ ಸ್ವಾಮಿ ಹೀಗೆ ಹಲವಾರು ಮಂದಿ ಭಾಗವಹಿಸಿ ದೇಶದಲ್ಲಿ ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇವರ ಕಾರ್ಯಕ್ರಮಕ್ಕೆ ವಿದೇಶದಿಂದ ಕೋಟಿಗಟ್ಟಲೆ ಹಣ ಪಡೆದಿದ್ದಾರೆ ಎಂಬ ಅನುಮಾನಗಳಿದ್ದು, ಇವರು ನಡೆಸುತ್ತಿರುವ ಸಂಘ ಸಂಸ್ಥೆಗಳು, ಟ್ರಸ್ಟ್‌ಗಳ ಹಣದ ಮೂಲದ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಬಿಜೆಪಿ ಮುಖಂಡರಾದ ಪ್ರಸನ್ನ, ಮನುಕುಮಾರ್ ಹೊಳಲು, ಶಿವಲಿಂಗಯ್ಯ, ಶಿವಕುಮಾರ್, ವಿನೋಭ, ರಾಜೇಶ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!