ಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧಿಗೆ ದಂಡಸಮೇತ 20 ವರ್ಷ ಜೈಲು ಶಿಕ್ಷೆ

ಹೊಸದಿಗಂತ ವರದಿ ಮಡಿಕೇರಿ:

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿಗೆ ವೀರಾಜಪೇಟೆಯ ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 55 ಸಾವಿರ ರೂ.ಗಳ‌ ದಂಡ ವಿಧಿಸಿ ತೀರ್ಪು ನೀಡಿದೆ.

ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪೂಜೆಕಲ್ಲು ನಿವಾಸಿ ಆನಂದ್ ಕುಮಾರ್ ಅಲಿಯಾಸ್‌ ಕುಶ ಅಲಿಯಾಸ್ ಅರುಣ (37) ಎಂಬಾತನೇ ಜೈಲು ಶಿಕ್ಷೆಗೆ ಗುರಿಯಾದವ.

ಪ್ರಕರಣದ ವಿವರ: ಅಪರಾಧಿಯು 2017ರ ಜನವರಿಯಿಂದ ಜೂನ್ ವರೆಗಿನ ಅವಧಿಯಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಒತ್ತಾಯದಿಂದ ಹಲವು ಬಾರಿ ಅತ್ಯಾಚಾರ ಮಾಡಿದ್ದಲ್ಲದೆ, ತಂದೆ-ತಾಯಿ ಇಲ್ಲದ ಸಮಯದಲ್ಲಿ ಹುಡುಗಿಯ ಮನೆಗೆ ನುಗ್ಗಿ ಶ್ರೀಮಂಗಲಕ್ಕೆ ಬರುವಂತೆ ಕರೆದಿದ್ದು, ಹುಡುಗಿ ನಿರಾಕರಿಸಿದ ಸಂದರ್ಭ ನನ್ನ ಜೊತೆ ಶ್ರೀಮಂಗಲಕ್ಕೆ ಬರದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿ ಕರೆದುಕೊಂಡು ಹೋಗಿದ್ದಾಗಿ ಹೇಳಲಾಗಿದೆ. ಅದಾದ ಬಳಿಕ ಆತನ ಮನೆಯಲ್ಲಿ ಹುಡುಗಿಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಬಲವಂತವಾಗಿ ಅತ್ಯಾಚಾರ ಮಾಡಿರುವ ಬಗ್ಗೆಯೂ ಆರೋಪಿಸಲಾಗಿದೆ.

ಶ್ರೀಮಂಗಲ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಪೋಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. ಬಳಿಕ ಆನಂದಕುಮಾರ್ ಮೇಲೆ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ವೀರಾಜಪೇಟೆಯ ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆನಂದ ಕುಮಾರ್ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಆತನಿಗೆ ಪೋಕ್ಸೋ ಕಾಯ್ದೆ ಅಡಿಯಲ್ಲಿ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 50ಸಾವಿರ ರೂ ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ ಎರಡು ವರ್ಷ ಜೈಲು ಮತ್ತು ಕಲಂ: 506 ಐಪಿಸಿ ರ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ಹಾಗೂ ಕಲಂ: 376(2)(ಎನ್) ಐಪಿಸಿ ಅಡಿಯಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!