ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಕರಾವಳಿಯ ಮೇಲೆ ದಿತ್ವಾ ಚಂಡಮಾರುತ ತನ್ನ ಪ್ರಭಾವವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಂಡಿದ್ದು, ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಗಾಳಿಯ ಅಬ್ಬರ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ತಮಿಳುನಾಡುನ ಕರಾವಳಿ ಹಾಗೂ ಒಳನಾಡಿನ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಹವಾಮಾನ ಸ್ಥಿತಿಯನ್ನು ಅವಲೋಕಿಸಿ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಿದೆ. ಅಪಾಯದ ಭೀತಿಯಿಂದ ಚೆನ್ನೈ, ತಿರುವಲ್ಲೂರು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾರೀ ಗಾಳಿಯಿಂದ ವಿದ್ಯುತ್ ತಂತಿಗಳು ತುಂಡಾಗಿದ್ದು, ಅನೇಕ ಕಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಜನರು ಅನಾವಶ್ಯಕವಾಗಿ ಹೊರಗೆ ಸಂಚರಿಸದಂತೆ ಹಾಗೂ ನದಿ ಮತ್ತು ಕಡಲತೀರಗಳ ಬಳಿ ಹೋಗದಂತೆ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

