ಹೊಸ ದಿಗಂತ ವರದಿ, ಅಂಕೋಲಾ:
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋವುಗಳ ಪೂಜಿಸಿ ದನ ಬೆಚ್ಚಿಸುವ ಸಂಪ್ರದಾಯ ತಾಲೂಕಿನ ಕೃಷಿಕರಲ್ಲಿ ಸಾಮಾನ್ಯವಾಗಿದ್ದು ದೀಪಾವಳಿ ಹಬ್ಬದಲ್ಲಿ ಪೂಜಿಸುವ ಬೇರುಗಳ ತಾಯಿ ಬೋರಜ್ಜಿ ಪರಿಕಲ್ಪನೆಯ ನಾಟಿ ವೈದ್ಯಕೀಯ ಪದ್ಧತಿ ಮೂಲಕ ಹೆಸರು ಪಡೆದಿರುವ ಬೆಳಂಬಾರದ ಹನುಮಂತ ಬೊಮ್ಮು ಗೌಡ ಅವರ ಮನೆಯಲ್ಲಿ ವೈಭವದಿಂದ ಗೋಪೂಜೆ ನಡೆಸಲಾಯಿತು.
ಹಿಂದು ಸಂಸ್ಕೃತಿಯಲ್ಲಿ ದೈವೀ ಸ್ಥಾನ ಪಡೆದಿರುವ ಗೋವುಗಳನ್ನು ಪ್ರತಿಯೊಂದು ಶುಭಕಾರ್ಯಗಳಲ್ಲೂ ಪೂಜಿಸಿ ಗೋಗ್ರಾಸ ನೀಡುವುದು ಸಾಮಾನ್ಯವಾಗಿದ್ದು ದೀಪಾವಳಿ ಹಬ್ಬದ ಬಲಿಪ್ರತಿಪದೆಯ ದಿನ ಗೋವುಗಳ ಪೂಜೆಗೆ ವಿಶೇಷ ಮಹತ್ವವಿದೆ.
ಕೃಷಿಕ ಕುಟುಂಬಗಳು ಹೆಚ್ಚಾಗಿರುವ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದಿಂದ ಗೋಪೂಜೆ ನಡೆಸುವುದನ್ನು ಕಾಣಬಹುದಾಗಿದೆ. ಬೆಳಂಬಾರದ ನಾಟಿ ವೈದ್ಯ ಹನುಮಂತ ಬೊಮ್ಮು ಗೌಡ ಅವರು ಕೃಷಿಕ ಕುಟುಂಬದವರಾಗಿದ್ದು ಅವರ ಮನೆತನದಲ್ಲಿ ತಲೆ ತಲಾಂತರದಿಂದ ಸಾಂಪ್ರದಾಯಿಕ ದೀಪಾವಳಿ ಹಬ್ಬದ ಆಚರಣೆ ನಡೆಸುತ್ತ ಬರಲಾಗುತ್ತಿದ್ದು ಬಲಿ ಪ್ರತಿಪದೆಯ ದಿನದಂದು ಗೋವುಗಳ ಪೂಜೆಯನ್ನು ಅತ್ಯಂತ ಸಂಭ್ರಮದಿಂದ ನಡೆಸಲಾಯಿತು
ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದ ಕುಟುಂಬದ ಸದಸ್ಯರು ಗೋವುಗಳಿಗೆ ಸ್ನಾನ ಮಾಡಿಸಿ ಮೈ ಮೇಲೆ ಶೇಡಿ ಮತ್ತು ಬಣ್ಣ ಬಣ್ಣದ ಚಿತ್ತಾರಗಳನ್ನು ಬಳಿದು ಕುತ್ತಿಗೆಗೆ ವಿವಿಧ ಬಗೆಯ ಮಣಿಸರ, ಹೊಸ ಘಂಟೆಗಳ ಸರ ತೊಡಿಸಿ ತೆಂಗಿನ ಕಾಯಿಕಡಿ,ಅವಲಕ್ಕಿ, ಕೊಟ್ಟೆ ಕಡಬು ಕಟ್ಪಿ, ವಿವಿಧ ಬಗೆಯ ಹೂವಿನ ಮಾಲೆಯನ್ನು ಹಾಕಿ ಪೂಜೆ ಸಲ್ಲಿಸಿದರು.
ಗೋವುಗಳಿಗೆ ಬಾಳೆ ಹಣ್ಣು, ಕೊಟ್ಟೆ ರೊಟ್ಟಿ, ಕಾಯಿ ಹಾಲು ಮೊದಲಾದ ಗೋ ಗ್ರಾಸವನ್ನು ನೀಡಿ ಕೊಟ್ಟಿಗೆಯಿಂದ ಹೊರಗೆ ಬಿಟ್ಟು ಪಟಾಕಿ ಸಿಡಿಸಿದಾಗ ಓಡುವ ಗೋವುಗಳ ಹಿಂದೆ ಬಾಲಮಕ್ಕಳು ಓಡಿ ಕುತ್ತಿಗೆಗೆ ಕಟ್ಟಿದ ತೆಂಗಿನ ಕಾಯಿ, ಕೊಟ್ಟೆ ಕಡಬು ಹರಿದು ತಿನ್ನಲು ಮುಗಿ ಬಿದ್ದ ದೃಶ್ಯ ಗ್ರಾಮೀಣ ಭಾಗಗಳ ಕೃಷಿಕರ ದೀಪಾವಳಿಯ ದನ ಬೆಚ್ಚಿಸುವ ವೈಭವಕ್ಕೆ ಸಾಕ್ಷಿಯಾಯಿತು.
ಸರ್ಕಾರದ ಮುಜರಾಯಿ ಇಲಾಖೆಯ ದೇವಾಲಯಗಳಲ್ಲೂ ಆಡಳಿತ ಮಂಡಳಿ ವತಿಯಿಂದ ಗೋಪೂಜೆ ನಡೆಸಲಾಯಿತು.

 
                                    