January20, 2026
Tuesday, January 20, 2026
spot_img

ದೀಪಾವಳಿಯ ರಂಗು: ಸಿಟಿ ಮಾರುಕಟ್ಟೆಯಲ್ಲಿ ಹೂವಿನ ಹೊಳೆ, ಟ್ರಾಫಿಕ್ ಕಿರಿಕಿರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಟಿ ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆಯೇ ಜನಸಾಗರವೇ ಹರಿದು ಬಂದಿದೆ. ಹಬ್ಬಕ್ಕೆ ಬೇಕಾದ ವಿವಿಧ ಬಗೆಯ ಹೂವುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದು, ಮಾರುಕಟ್ಟೆ ಪ್ರದೇಶದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಕನಕಾಂಬರ, ಮಲ್ಲಿಗೆ, ಸೇವಂತಿಗೆ, ಚೆಂಡು ಹೂವು ಸೇರಿದಂತೆ ಬಗೆ ಬಗೆಯ ಹೂವುಗಳ ಮಾರಾಟ ಭರದಿಂದ ಸಾಗಿದೆ. ಆದರೆ, ರಾಜ್ಯದಲ್ಲಿ ಸುರಿದ ಸತತ ಮಳೆಯ ಕಾರಣದಿಂದಾಗಿ ಹೂವಿನ ಲಭ್ಯತೆಯ ಮೇಲೆ ಪರಿಣಾಮ ಉಂಟಾಗಿದ್ದು, ಹಿಂದಿನ ದಿನಗಳಿಗಿಂತ ದರದಲ್ಲಿ ಕೊಂಚ ಪ್ರಮಾಣದ ಏರಿಕೆ ಕಂಡು ಬಂದಿದೆ. ದರ ಏರಿಕೆ ನಡುವೆಯೂ ಜನರು ಉತ್ಸಾಹದಿಂದ ಹೂವುಗಳನ್ನು ಖರೀದಿಸುತ್ತಿದ್ದಾರೆ.

ಸಂಚಾರಕ್ಕೆ ಅಡ್ಡಿ:

ಜನದಟ್ಟಣೆಯ ಹಿನ್ನೆಲೆಯಲ್ಲಿ ಕೆ.ಆರ್. ಮಾರ್ಕೆಟ್‌ ಹಾಗೂ ಅವೆನ್ಯೂ ರಸ್ತೆಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳ ದಟ್ಟಣೆಯಿಂದಾಗಿ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದ್ದು, ಗ್ರಾಹಕರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ. ಇದಕ್ಕೂ ಹೆಚ್ಚಾಗಿ, ಕೆಲವು ಗ್ರಾಹಕರು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಅಪಾಯಕಾರಿಯಾಗಿ ಫ್ಲೈಓವರ್ ರಸ್ತೆಗಳ ಮೇಲೆಯೇ ವಾಹನಗಳನ್ನು ಪಾರ್ಕಿಂಗ್ ಮಾಡಿ ಹೂವು ಖರೀದಿಗೆ ತೆರಳಿದ್ದಾರೆ. ಈ ಅವೈಜ್ಞಾನಿಕ ಪಾರ್ಕಿಂಗ್ ಕ್ರಮದಿಂದಾಗಿ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

Must Read