Monday, October 20, 2025

ದೀಪಾವಳಿಯ ದೀಪವೇ ಮನೆಗೆ ಕಂಟಕವಾಯ್ತು: ಬೆಂಕಿಗೆ ಸುಟ್ಟುಭಸ್ಮವಾದ ಮನೆ, ಏಳು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಾವಳಿ ಹಬ್ಬದ ಸಂಭ್ರಮ ಮಧ್ಯೆ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಕ್ರಾಸ್‌ನಲ್ಲಿ ಮನೆಯ ಎದುರು ಹಚ್ಚಿದ್ದ ದೀಪದಿಂದ ಬೆಂಕಿ ತಗುಲಿ ಭಾರೀ ಅವಾಂತರ ಉಂಟಾಗಿದೆ. ಈ ಘಟನೆದಲ್ಲಿ ಏಳು ಮಂದಿ ಗಾಯಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗಾಯಾಳುಗಳನ್ನು ತಕ್ಷಣವೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿಯ ಪ್ರಕಾರ, ಉಮೇಶ್ ಮೇಟಿ ಅವರ ಕಟ್ಟಡದಲ್ಲಿ ಈ ಬೆಂಕಿ ಅವಘಡ ನಡೆದಿದೆ. ಅದೇ ಕಟ್ಟಡದಲ್ಲಿ ರಾಜೇಂದ್ರ ತಪಶೆಟ್ಟಿ ಕುಟುಂಬ ಹಾಗೂ ಇನ್ನೊಂದು ಕುಟುಂಬ ಬಾಡಿಗೆಗೆ ವಾಸಿಸುತ್ತಿದ್ದರು. ದೀಪಾವಳಿ ಪ್ರಯುಕ್ತ ರಾಜೇಂದ್ರ ತಪಶೆಟ್ಟಿ ಕುಟುಂಬ ಮನೆ ಎದುರು ದೀಪ ಹಚ್ಚಿದ್ದಾಗ ಆ ದೀಪದ ಬೆಂಕಿ ಅಲ್ಲಿ ಬಿದ್ದಿದ್ದ ಆಯಿಲ್‌ಗೆ ತಗುಲಿ ಬೆಂಕಿ ವ್ಯಾಪಿಸಿದೆ. ಬೆಂಕಿಯು ಕ್ಷಣಾರ್ಧದಲ್ಲಿ ಎರಡು ಬೈಕ್‌ಗಳನ್ನು ಸುಟ್ಟುಹಾಕಿ ಮನೆಗೂ ತಗುಲಿದ್ದು, ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಅಗ್ನಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ.

ಆಕಸ್ಮಿಕವಾಗಿ ಉಂಟಾದ ಅಗ್ನಿಜ್ವಾಲೆಯ ತೀವ್ರತೆಗೆ ಮನೆಯಲ್ಲಿ ಇದ್ದವರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ. ರಾಜೇಂದ್ರ ತಪಶೆಟ್ಟಿ ಕುಟುಂಬದವರು ಅದೃಷ್ಟವಶಾತ್ ಪಾರಾಗಿದ್ದರೂ, ಮೇಲ್ಮಹಡಿಯಲ್ಲಿ ವಾಸಿಸುತ್ತಿದ್ದ ಮತ್ತೊಂದು ಕುಟುಂಬದ ಸದಸ್ಯರು ಬೆಂಕಿಯ ಜ್ವಾಲೆಯಿಂದ ಗಾಯಗೊಂಡಿದ್ದಾರೆ. ಮನೆ ಒಳಗಿನ ಸಾಮಾನುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಸ್ಥಳಕ್ಕೆ ತಕ್ಷಣವೇ ಬಾಗಲಕೋಟೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕಲಾದಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.

error: Content is protected !!