ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನೀರಾವರಿ ಇಲಾಖೆ ಮತ್ತು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಭೂಸ್ವಾಧೀನ ಸಂಬಂಧಿತ ಕೋರ್ಟ್ ಪ್ರಕರಣಗಳಲ್ಲಿ ಕಂಡುಬಂದ ಗಂಭೀರ ಅನಿಯಮಿತತೆಗಳನ್ನು ಪರಿಶೀಲಿಸಲು ವಿಶೇಷ ತನಿಖಾ ದಳ (ಎಸ್ಐಟಿ) ರಚಿಸಲು ಸರ್ಕಾರ ಮುಂದಾಗಿದೆ.
ಅಧಿಕಾರಿಗಳ ಕರ್ತವ್ಯಲೋಪ ಹಾಗೂ ವಕೀಲರ ನಿರ್ಲಕ್ಷ್ಯ ರಾಜ್ಯಕ್ಕೆ ಭಾರೀ ಆರ್ಥಿಕ ಹೊರೆ ತರಬಹುದಾದ್ದರಿಂದ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿಯಲ್ಲಿ, ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳ ಸಂಖ್ಯೆಯ ಬಗ್ಗೆ, ಅವು ಇತ್ಯರ್ಥವಾಗದೆ ಉಳಿದಿರುವ ಕಾರಣಗಳ ಬಗ್ಗೆ ಹಾಗೂ ಇಲಾಖೆಯ ಒಳಗಿನ ದೋಷಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಇತ್ತೀಚೆಗೆ ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ಭೂಸ್ವಾಧೀನ ಪರಿಹಾರದ ಮೊತ್ತ ಹೆಚ್ಚಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದು, ಇದಕ್ಕಾಗಿ 75 ಸಾವಿರ ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ನೀರಾವರಿ ನಿಗಮಗಳ ವ್ಯಾಪ್ತಿಯಲ್ಲಿ ಒಟ್ಟಾರೆ 61,843 ಪ್ರಕರಣಗಳು ಇನ್ನೂ ಬಾಕಿ ಉಳಿದಿರುವುದರಿಂದ ಸರ್ಕಾರ ಗಂಭೀರವಾಗಿ ವಿಷಯವನ್ನು ಪರಿಗಣಿಸಿದೆ.
ಬೆಂಗಳೂರು ವ್ಯಾಪ್ತಿಯ ತನಿಖೆಯ ವೇಳೆ ಅಧಿಕಾರಿಗಳು ಹಾಗೂ ಕಾನೂನು ತಂಡಗಳು ಕಾಲಹರಣ ಮಾಡಿದ್ದೇ ಪ್ರಮುಖ ಸಮಸ್ಯೆ ಎಂದು ವರದಿಯಲ್ಲಿ ಸ್ಪಷ್ಟವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ನವೆಂಬರ್ 10ರಂದು ನಡೆಯಲಿರುವ ಪ್ರಮುಖ ವಿಚಾರಣೆಗೆ ಮುನ್ನ ಎಲ್ಲ ದೋಷಗಳನ್ನು ಗುರುತಿಸಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

