ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ ಶುರುವಾದ ಹನಿಟ್ರ್ಯಾಪ್ ಗದ್ದಲ ರಾಜ್ಯವ್ಯಾಪ್ತಿ ಹರಡಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವ ಕೆಎನ್ ರಾಜಣ್ಣ ಮೇಲೆ ಹನಿ ಟ್ರ್ಯಾಪ್ ನಡೆದಿದೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ಇದಕ್ಕೆ ಸ್ಪಷ್ಟನೆ ನೀಡಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ನನ್ನ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿತ್ತು ಆದರೆ ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದರು.
ಇದೀಗ ಈ ಒಂದು ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಪಟ್ಟಂತೆ ಹಾಸನದ ವಕೀಲ ದೇವರಾಜೇಗೌಡ, ರಾಜ್ಯದಲ್ಲಿ ಹನಿಟ್ರ್ಯಾಪ್ ಪಿತಾಮಹ ಡಿಕೆ ಶಿವಕುಮಾರ್ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಹನಿಟ್ರ್ಯಾಪ್ ಬಗ್ಗೆ ವರ್ಷದ ಹಿಂದೆಯೇ ನಾನು ಹೇಳಿದ್ದೆ. ಡಿಸಿಎಂ ಡಿಕೆ ಶಿವಕುಮಾರ್ ರಾಜಕೀಯ ಲಾಭಕ್ಕಾಗಿ ಅಧಿಕಾರದ ದಾಹದಿಂದ ಏನೇನು ಮಾಡುತ್ತಾರೆ ಎಂದು ಎಳೆ ಎಳೆಯಾಗಿ ಹೇಳಿದ್ದೆ. ಅಂದು ಜೆಡಿಎಸ್, ಬಿಜೆಪಿಯವರು ಹನಿಟ್ರ್ಯಾಪ್ ಗೆ ಬಲಿಯಾಗಿದ್ದರು.
ಈಗ ರಾಜ್ಯದ ಸದನದಲ್ಲಿ ಸಚಿವ ಕೆ ಎನ್ ರಾಜಣ್ಣ ಹನಿಟ್ರ್ಯಾಪ್ ಕುರಿತು ಹೇಳಿದ್ದಾರೆ. 48 ಜನರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಹನಿಟ್ರ್ಯಾಪ್ ಮಾಡಿ ಭವಿಷ್ಯ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ವರ್ಷದ ಹಿಂದೆ ನಾನು ಹೇಳಿದ್ದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ನನ್ನ ಮೇಲೆ ಕೇಸ್ ಹಾಕಿಸಿ ಜೈಲಿಗೆ ಕಳುಹಿಸಿದ್ದರು ಎಂದು ದೇವರಾಜೇಗೌಡ ಗಂಭೀರವಾದ ಆರೋಪ ಮಾಡಿದರು.