ಹೊಸದಿಂಗತ ಡಿಜಿಟಲ್ ಡೆಸ್ಕ್:
ರಾಜ್ಯದ ಜನರು ನಮಗೆ ದೊಡ್ಡ ಶಕ್ತಿ ನೀಡಿದ್ದಾರೆ. ಅವರ ಪಾದಕ್ಕೆ ನಮ್ಮ ನಮಸ್ಕಾರ. ಇಂದು ಹಚ್ಚಿದ ಜ್ಯೋತಿ ಮನೆ ಮನ ಬೆಳಗಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ದೀಪ ಬೆಳಗುವುದರ ಮೂಲಕ ಶಕ್ತಿ ಯೋಜನೆಯನ್ನು ಉದ್ಘಾಟಿಸಿದ ಡಿಸಿಎಂ ಡಿಕೆಶಿ, ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮ ಬೆಂಗಳೂರಿನಲ್ಲಿ ಮಾತ್ರ ಅಲ್ಲ ಪ್ರತಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಜನರ ಸೇವೆಯೇ ಜನಾರ್ದನ ಸೇವೆ, ಜನರ ಕೆಲಸ ದೇವರ ಕೆಲಸ ಅಂತ ವಿಧಾನಸೌಧದ ಮೇಲೆಯೂ ಬರದಿದ್ದಾರೆ. ಅದರಂತೆ ನಾವು ಕಾರ್ಯನಿರ್ವಹಿಸುತ್ತೇವೆ. ದೇಶಕ್ಕೆ ಇತಿಹಾಸ, ಸ್ವಾತಂತ್ರ್ಯ ತಂದ ಪಕ್ಷ ಕಾಂಗ್ರೆಸ್. ಡಬಲ್ ಇಂಜಿನ್ ಸರ್ಕಾರ ಇದ್ದರೂ ಜನರು ಕಾಂಗ್ರೆಸ್ ಸರ್ಕಾರವನ್ನು ತಂದಿದ್ದಾರೆ. ನಮ್ಮ ನಡೆ, ನುಡಿ ಮೇಲೆ ನಂಬಿಕೆ ಇಟ್ಟು ಅಧಿಕಾರ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.
ನಾವು ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ಹೆಣ್ಣು ಕುಟುಂಬದ ಕಣ್ಣು ಅಂತ ಕರೆಯುತ್ತೇವೆ. ಪುರುಷರ ಹೆಸರಿಗೂ ಮೊದಲು ಮಹಿಳಾ ಹೆಸರು ಇರುತ್ತದೆ. ಇದು ನಮ್ಮ ಭಾರತೀಯ ಸಂಸ್ಕೃತಿ ಎಂದರು. ಇಂದು ಸ್ವಲ್ಪ ತಡಮಾಡಿ ಕಾರ್ಯಕ್ರಮ ಆರಂಭಿಸಿದ್ದೇವೆ. ಇವತ್ತು ಹಚ್ಚಿದ ಜ್ಯೋತಿ ಮನೆ ಮನ ಬೆಳಗಲಿ ಎಂದು ಹಾರೈಸಿದರು.
ಬಸವಣ್ಣನವರ ನಾಡಿನಲ್ಲಿ ನಾವು ಬದುಕಿದ್ದೇವೆ. ನಾವು ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು. ಬಿಜೆಪಿ, ಜೆಡಿಎಸ್ ಟೀಕೆ ಮಾಡುತ್ತಿದೆ. ಆದರೆ ಟೀಕೆಗಳು ಸಾಯುತ್ತವೆ ಮತ್ತು ಕೆಲಸ ಮಾತ್ರ ಉಳಿಯುತ್ತದೆ ಎನ್ನುವ ಮೂಲಕ ವಿರೋಧ ಪಕ್ಷಗಳಿಗೆ ಡಿಕೆಶಿ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರ ಹಳೆಯ ಬಸ್ ಬಿಲ್ ಕಟ್ಟಿಲ್ಲ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಸ್ ಕರೆಸಲಾಗಿತ್ತು. ಅದರ ಬಿಲ್ ಬಾಕಿ ಉಳಿಸಿಕೊಂಡಿದೆ. ಆ ರೀತಿಯಲ್ಲಿ ಸರ್ಕಾರ ಮಾಡಬಾರದು. ಸಾರಿಗೆ ಸಂಸ್ಥೆ ಉಳಿಯಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ಎರಡು ಸಾವಿರ ಕೊಡ್ತೇವೆ ಅಂದಾಗ ಟೀಕೆ ಮಾಡಿದರು. ಇಂದು ಮಧ್ಯಪ್ರದೇಶದಲ್ಲಿ ಸಾವಿರ ರೂಪಾಯಿ ಕೊಡ್ತಾ ಇದ್ದಾರೆ. ಆದರೆ ನಾವು ಟೀಕೆ ಮಾಡುತ್ತಿಲ್ಲ ಎಂದು ಬಿಜೆಪಿ ದ್ವಂದ್ವ ನಿಲುವಿನ ವಿರುದ್ಧ ಕಿಡಿಕಾರಿದರು.