ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಭ್ರಷ್ಟಾಚಾರದ ಆರೋಪದ ಬಿರುಸು ಮತ್ತೆ ಮೂಡಿದೆ. ಕಾಂಗ್ರೆಸ್ ಹಿರಿಯ ನಾಯಕ ಬಿಆರ್ ಪಾಟೀಲ್ ವಸತಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ನೀಡಿರುವ ಹೇಳಿಕೆ ಆಡಳಿತದ ಪಕ್ಷದೊಳಗೆ ಭಾರಿ ಸಂಚಲನ ಉಂಟುಮಾಡಿದೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಎಲ್ಲವನ್ನೂ ಸುಳ್ಳು ಎಂದು ತಿರಸ್ಕರಿಸಿದ್ದಾರೆ.
ರಾಮನಗರದ ಹಾರೋಹಳ್ಳಿಯಲ್ಲಿ ಮಾತನಾಡಿದ ಡಿಕೆಶಿ, “ಅದು ಗ್ರಾಮಸಭೆಯಲ್ಲಿ ಯಾರೋ ಒಬ್ಬರು ಹೇಳಿದ್ರು ಅಂತ, ಅದರಿಂದ ತೀರ್ಮಾನವಾಗುವುದಿಲ್ಲ. ಪೂರ್ತಿ ಮಾಹಿತಿ ಇಲ್ಲದೆ ಬಿಆರ್ ಪಾಟೀಲ್ ಮಾತನಾಡಿರಬಹುದು. ನಾನು ಅವರೊಂದಿಗೆ ಮಾತನಾಡಿ ಸ್ಪಷ್ಟನೆ ಕೇಳುತ್ತೇನೆ,” ಎಂದರು.
ಇತ್ತ, ಈ ಹೇಳಿಕೆಯಿಂದ ಉಂಟಾದ ರಾಜಕೀಯ ತೀವ್ರತೆಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಬಿಆರ್ ಪಾಟೀಲ್ ಅವರನ್ನು ಕರೆದು ಸ್ಪಷ್ಟನೆ ನೀಡುವಂತೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಭ್ರಷ್ಟಾಚಾರ ಆರೋಪಗಳಿಗೆ ಕಾಂಗ್ರೆಸ್ ಪ್ರತಿಸ್ಪಂದಿಸುತ್ತಿರುವ ರೀತಿ, ಬಿಜೆಪಿಗೆ ಅಸ್ತ್ರವಾಗಬಹುದೆಂಬ ಆತಂಕವೂ ಪಕ್ಷದಲ್ಲಿ ಮೂಡಿದೆ.