ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಡಿ.ಕೆ.ಶಿವಕುಮಾರ್ ಸಿಡಿ ಮತ್ತು ವಿಡಿಯೋ ತಯಾರಿಕೆಯಲ್ಲಿ ನಿಪುಣರು ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶಿವಕುಮಾರ್ ಸಿಡಿ ಮಾಡುವ ಹವ್ಯಾಸವನ್ನು ಬಿಟ್ಟಿಲ್ಲ. ಮಂಗಳವಾರ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಅವರು ನನ್ನ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಇತರರ ಹಳೆಯ ವಿಡಿಯೋಗಳನ್ನು ಪ್ಲೇ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಿವಕುಮಾರ್ ಅವರಿಗೆ ಅಷ್ಟೊಂದು ಉತ್ಸುಕತೆ ಇದ್ದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸಿದ್ದರಾಮಯ್ಯನವರು ಈ ಹಿಂದೆ ಮಾಡಿರುವ ಟೀಕೆಗಳನ್ನೂ ಅವರು ಪ್ರದರ್ಶಿಸಬೇಕು . ನಾನು ಹಿಂದೆ ನೀಡಿದ್ದ ಹೇಳಿಕೆಗಳನ್ನು ಡಿವಿಡಿ ಶಿವು ಪ್ಲೇ ಮಾಡಿ ತೋರಿಸಿದ್ದಾರೆ. ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ಬಗ್ಗೆ ಏನೆಲ್ಲ ಮಾತಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಏನೆಲ್ಲಾ ಮಾತನ್ನಾಡಿದ್ದಾರೆ ಎನ್ನುವುದನ್ನೂ ತೋರಿಸಬೇಕಿತ್ತು. ಅದನ್ನೆಲ್ಲ ಮರೆತಿದ್ದೀರಿ ಯಾಕೆ? ಎಂದು ಪ್ರಶ್ನಿಸಿದರು.