Saturday, December 13, 2025

ಕುರ್ಚಿ ಕಿತ್ತಾಟಕ್ಕೆ ‘ಡಿಕೆಶಿ ಪಟ್ಟಾಭಿಷೇಕ’ ಟ್ವಿಸ್ಟ್: ಜ.6ಕ್ಕೆ ಸಿಎಂ ಆಗ್ತಾರೆ ಎಂದ ಡಿಸಿಎಂ ಆಪ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿ ಕುರಿತು ನಡೆಯುತ್ತಿರುವ ಗುಪ್ತ ಕದನಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದ ಶಾಸಕ ಇಕ್ಬಾಲ್ ಹುಸೇನ್ ಅವರು, “ಜನವರಿ 6ಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟಾಭಿಷೇಕವಾಗಲಿದೆ” ಎಂಬ ಸ್ಫೋಟಕ ಹೇಳಿಕೆ ನೀಡುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ಹೋರಾಟ ಮತ್ತು ಶ್ರಮಕ್ಕೆ ಪ್ರತಿಫಲ ಸಿಗಬೇಕು. ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಮತ್ತು ಅವಕಾಶ ಸಿಗಬೇಕು ಎಂಬುದು ನಮ್ಮ ಬೇಡಿಕೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಬಹುಶಃ ಜನವರಿ 6ರಂದು ಡಿ.ಕೆ. ಶಿವಕುಮಾರ್ ಸಿಎಂ ಆಗುವ ಸಾಧ್ಯತೆ ಇದ್ದು, ಈ ಬಗ್ಗೆ ನನಗೆ ಶೇ.99ರಷ್ಟು ವಿಶ್ವಾಸವಿದೆ ಎಂದು ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಲದೆ, ಜ. 6 ಮತ್ತು ಜ. 9 ಡಿ.ಕೆ. ಶಿವಕುಮಾರ್ ಅವರ ಅದೃಷ್ಟ ಸಂಖ್ಯೆಗಳು ಎಂದು ಅವರು ಉಲ್ಲೇಖಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ರಾಜ್ಯದ ಆಸ್ತಿ. ನಮ್ಮಲ್ಲಿ ಯಾವುದೇ ಬಣ ಇಲ್ಲ, ಬದಲಾಗಿ ಡಿಕೆಶಿ ಅವರಿಗೆ ಪ್ರತಿಫಲ ಸಿಗಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.

ಇದೇ ವೇಳೆ, ನಾಳೆ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ದೆಹಲಿಗೆ ಹೋಗಿ ‘ವೋಟ್ ಚೋರಿ’ ಪ್ರತಿಭಟನೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು. ದೆಹಲಿ ಭೇಟಿಯ ಸಮಯದಲ್ಲಿ ಯಾವುದೇ ವರಿಷ್ಠರನ್ನು ಭೇಟಿಯಾಗುವುದಿಲ್ಲ. ಈಗಾಗಲೇ ನಮ್ಮ ಮನವಿಯನ್ನು ವರಿಷ್ಠರಿಗೆ ತಿಳಿಸಿದ್ದೇವೆ ಮತ್ತು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.

ನಾಯಕತ್ವ ಬದಲಾವಣೆ ಇಲ್ಲ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಹುಸೇನ್, ಯಾರು ಏನೇ ಹೇಳಲಿ, ರಾಜ್ಯದ ಜನ ಮತ್ತು ಈ ಭಾಗದ ಶಾಸಕರು ಡಿ.ಕೆ.ಶಿಗೆ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವುದು ಖಚಿತ ಎಂಬ ವಿಶ್ವಾಸವನ್ನು ಪುನರುಚ್ಚರಿಸಿದರು. ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ನಮ್ಮಲ್ಲಿ 140 ಶಾಸಕರ ಸಂಖ್ಯಾಬಲವಿದೆ. ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು.

error: Content is protected !!