Wednesday, December 24, 2025

ಚೆಂಡು ಹೈಕಮಾಂಡ್ ಅಂಗಳದಲ್ಲಿದ್ದರೂ ಬ್ಯಾಟ್ ಬೀಸದ ಡಿಕೆಶಿ: ಸಿಎಂ ಕುರ್ಚಿ ಫೈಟ್‌ನಲ್ಲಿ ಹೊಸ ಟ್ವಿಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ‘ಅಧಿಕಾರ ಹಂಚಿಕೆ’ಯ ಚರ್ಚೆಯ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಚೆಂಡನ್ನು ದೆಹಲಿ ಅಂಗಳಕ್ಕೆ ಎಸೆದ ಬೆನ್ನಲ್ಲೇ, ಡಿಕೆಶಿ ಅವರು ತಾವು ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್‌ಗೆ ಯಾವುದೇ ಒತ್ತಡ ಹೇರಲು ಸಿದ್ಧರಿಲ್ಲ ಎಂಬ ಸುಳಿವು ನೀಡಿದ್ದಾರೆ.

ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸ ಮುಗಿಸಿ ಈಗಷ್ಟೇ ಮರಳಿದ್ದಾರೆ. ಈ ಸಮಯದಲ್ಲಿ ಅವರಿಗೆ ಅಧಿಕಾರ ಹಂಚಿಕೆಯಂತಹ ವಿಷಯಗಳ ಬಗ್ಗೆ ಹೇಳಿ ಕಿರಿಕಿರಿ ಉಂಟುಮಾಡಲು ನನಗೆ ಇಷ್ಟವಿಲ್ಲ. ನನಗೆ ಸ್ಥಾನಮಾನಕ್ಕಿಂತ ಪಕ್ಷ ದೊಡ್ಡದು. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯಲು ಸಿದ್ಧನಿದ್ದೇನೆ ಎಂಬ ‘ವೈರಾಗ್ಯ’ದ ಮಾತುಗಳನ್ನು ಆಡಿದರು.

ಇತ್ತೀಚೆಗೆ ನಡೆದ ಸಚಿವರ ಉಪಹಾರ ಕೂಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ “ಶೇರಿಂಗ್ ಮತ್ತು ಕೇರಿಂಗ್” ಸಹಜ ಪ್ರಕ್ರಿಯೆ. ಇಂತಹ ಸಭೆಗಳನ್ನು ರಾಜಕೀಯ ಊಹಾಪೋಹಗಳಿಗೆ ತಳುಕು ಹಾಕುವುದು ಬೇಡ ಎಂದು ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಅಹಿಂದ ಸಮಾವೇಶದ ಬಗ್ಗೆ ಕೇಳಿದ ಪ್ರಶ್ನೆಗೆ, “ಅವರಿಗೆ ಒಳ್ಳೆಯದಾಗಲಿ” ಎಂದು ಮೃದುವಾಗಿಯೇ ಉತ್ತರಿಸುವ ಮೂಲಕ ಯಾವುದೇ ವಿವಾದಕ್ಕೆ ಎಡೆಮಾಡಿಕೊಡಲಿಲ್ಲ.

ಮುಖ್ಯಮಂತ್ರಿ ಬದಲಾವಣೆಯ ವದಂತಿಗಳ ನಡುವೆಯೇ ಡಿಕೆಶಿ ಅವರ ಈ ವಿನಮ್ರ ನಡೆ ರಾಜಕೀಯ ವಲಯದಲ್ಲಿ ಹಲವು ಅರ್ಥಗಳನ್ನು ನೀಡುತ್ತಿದೆ. ಇದು ಹೈಕಮಾಂಡ್ ಮೆಚ್ಚಿಸಲು ಮಾಡುತ್ತಿರುವ ತಂತ್ರವೋ ಅಥವಾ ನಿಜವಾಗಿಯೂ ಅವರು ತಾಳ್ಮೆಯ ಹಾದಿ ಹಿಡಿದಿದ್ದಾರೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

error: Content is protected !!