Saturday, November 22, 2025

ಭಾರತೀಯ ಸಂಸ್ಕೃತಿಯಲ್ಲಿ ಪರಿಸರ ಸಂರಕ್ಷಣೆಯ ಮರ್ಮ ಬಿಚ್ಚಿಟ್ಟ ಡಿಕೆಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇಂದು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ಬಣ್ಣಿಸಿದರು.

ಧಾರ್ಮಿಕ ಆಚರಣೆ ಮತ್ತು ಪರಿಸರ ಪ್ರೀತಿ:

“ನಮ್ಮ ಧರ್ಮದಲ್ಲಿ ನಾವು ಅರಳಿ ಮರ, ಬೇವಿನ ಮರ, ಮತ್ತು ಬನ್ನಿ ಮರಗಳಿಗೆ ಪೂಜೆ ಮಾಡುತ್ತೇವೆ. ಪ್ರಾಣಿಗಳನ್ನು ಸಹ ದೇವರ ವಾಹನಗಳೆಂದು ಗೌರವಿಸುತ್ತೇವೆ. ನಮ್ಮ ಈ ಆಚರಣೆಗಳು ನಿಸರ್ಗವನ್ನು ಕಾಪಾಡಿಕೊಂಡು ಹೋಗಬೇಕು ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರುತ್ತವೆ,” ಎಂದು ಡಿಸಿಎಂ ಶಿವಕುಮಾರ್ ಹೇಳಿದರು.

ಪ್ರಕೃತಿ ನಿಯಮಕ್ಕೆ ಬೆಲೆ ಕೊಡಿ:

ಪರಿಸರ, ನೀರು, ಗಾಳಿ ಮತ್ತು ಬೆಳಕು ಶಾಶ್ವತವಾಗಿ ಇರುವಂತಹವು. ನಾವು ಇರಲಿ ಇಲ್ಲದಿರಲಿ, ಇವು ಹಾಗೆಯೇ ಉಳಿಯುತ್ತವೆ. “ನೀರು ಮತ್ತು ಗಾಳಿಗೆ ಯಾವುದೇ ಬಣ್ಣವಿಲ್ಲ. ಪ್ರಕೃತಿಯ ನಿಯಮ ಎಲ್ಲರಿಗೂ ಒಂದೇ. ಸೂರ್ಯ ಹುಟ್ಟುವುದು, ಮುಳುಗುವುದು, ಗಾಳಿ ಬೀಸುವ ದಿಕ್ಕು – ಎಲ್ಲವೂ ಪ್ರಕೃತಿ ನಿಯಮದಂತೆಯೇ ನಡೆಯುತ್ತವೆ,” ಎಂದು ಅವರು ತಿಳಿಸಿದರು.

ಶುದ್ಧ ನೀರಿನ ಮಹತ್ವವನ್ನು ಒತ್ತಿ ಹೇಳಿದ ಡಿಕೆಶಿ, “ನಮ್ಮ ಕಾಲದಲ್ಲಿ ನಾವು ಬಾವಿ ಮತ್ತು ಹೊಳೆಗಳಿಂದ ನೇರವಾಗಿ ನೀರನ್ನು ತರುತ್ತಿದ್ದೆವು. ಆದರೆ ಈಗ ಒಂದು ಲೀಟರ್ ಕುಡಿಯುವ ನೀರಿಗೆ 30 ರಿಂದ 40 ಖರ್ಚು ಮಾಡಬೇಕಿದೆ. ಶುದ್ಧ ನೀರು ಇಲ್ಲವಾದರೆ ನಾವು ಬದುಕಲು ಸಾಧ್ಯವಿಲ್ಲ,” ಎಂದು ವಿಷಾದ ವ್ಯಕ್ತಪಡಿಸಿದರು.

ದೆಹಲಿ ವಾಯುಮಾಲಿನ್ಯದ ಭೀಕರತೆ:

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದ ಅನುಭವವನ್ನು ಹಂಚಿಕೊಂಡ ಅವರು, ವಾಯುಮಾಲಿನ್ಯದ ಮಟ್ಟವನ್ನು ಎತ್ತಿ ತೋರಿಸಿದರು. “ನಾನು ದೆಹಲಿಗೆ ಹೋದಾಗ, ನನ್ನ ಪಿ.ಎ. ಎದೆ ಬಳಿ ಒಂದು ಪುಟ್ಟ ಏರ್ ಪ್ಯೂರಿಫೈಯರ್ ಯಂತ್ರವನ್ನು ಧರಿಸಿದ್ದರು. ದೆಹಲಿಯ ಗಾಳಿಯನ್ನು ಒಂದು ದಿನ ಸೇವಿಸಿದರೆ, ಅದು 14 ಸಿಗರೇಟ್‌ಗಳನ್ನು ಸೇದುವುದಕ್ಕೆ ಸಮಾನವಾದಷ್ಟು ವಾಯುಮಾಲಿನ್ಯದ ಪರಿಸ್ಥಿತಿಯಿದೆ,” ಎಂದು ತಿಳಿಸಿದರು.

ಇದರ ಹಿನ್ನೆಲೆಯಲ್ಲಿ, ಕರ್ನಾಟಕದ ಜನರನ್ನು ಶ್ಲಾಘಿಸಿದ ಅವರು, “ನಾವು ಬಹಳ ಪುಣ್ಯವಂತರು. ನಮ್ಮ ರಾಜ್ಯದಲ್ಲಿ ನಾವು ಪರಿಸರವನ್ನು ಚೆನ್ನಾಗಿ ಕಾಪಾಡಿಕೊಂಡು ಬಂದಿದ್ದೇವೆ,” ಎಂದು ಹೇಳುತ್ತಾ, ಪರಿಸರ ಸಂರಕ್ಷಣೆಯನ್ನು ಮುಂದುವರೆಸುವಂತೆ ಕರೆ ನೀಡಿದರು.

error: Content is protected !!