ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಸಾಹುಕಾರ ಕನಕಪುರ ಬಂಡೆ ನಡುವೆ ರಾಜಕೀಯ ಸಮರ ಶುರುವಾಗಿದೆ. ಇಲ್ಲಿವರೆಗೂ ಶಾಂತವಾಗಿದ್ದ ರಮೇಶ್ ಜಾರಕಿಹೊಳಿ ಇದ್ದಕ್ಕಿದ್ದಂತೆ ನಿನ್ನೆ ಡಿ.ಕೆ.ಶಿವಕುಮಾರ್ ವಿರುದ್ಧ ಗುಡುಗಿದ್ದರು. ಪುಕ್ಕಲ, ಮೋಸಗಾರ ರಾಜಕಾರಣಿ ಎಂದು ಟೀಕಿಸಿದ ಬೆನ್ನಲ್ಲೇ ಜಾರಕಿಹೊಳಿ ನಿವಾಸಕ್ಕೆ ಡಿಕೆಶಿ ಬೆಂಬಲಿಗರು ಅಶ್ಲೀಲ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಎನ್ನಲಾಗಿದೆ.
ತಡರಾತ್ರಿ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸದ ಗೋಡೆಗಳಿಗೆ ಅವಾಚ್ಯ ನಿಂದನೆಗಳಿರುವ ಅಶ್ಲೀಲ ಪೋಸ್ಟರ್ ಅಂಟಿಸಿದ್ದು, ಇದೇ ನಿನ್ನ ಸಂಸ್ಕೃತಿ ಎಂದು ಬರೆಯಲಾಗಿದೆ. ಇದೆಲ್ಲಾ ಡಿಕೆಶಿ ಬೆಂಬಲಿಗರ ಕೈವಾಡ ಎಂಬ ಆರೋಪ ಕೇಳಿಬರುತ್ತಿದ್ದು, ವಿಷಯ ಗಮನಕ್ಕೆ ಬರುತ್ತಿದ್ದಂತೆ ಶೇಷಾದ್ರಿಪುರ ಉಪ ವಿಭಾಗ ಎಸಿಪಿ ಪ್ರಕಾಶ್ ಭೇಟಿ ಕೊಟ್ಟು ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಇನ್ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾರಕಿಹೊಳಿ ನಿವಾಸಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶೀಘ್ರದಲ್ಲೇ ಮಾಜಿ ಆಗಲಿದ್ದಾರೆ ಎಂದು ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದರು. ಅಲ್ಲದೆ ಇಂತಹ ಪುಕ್ಕಲು, ಮೋಸಗಾರ, ನೇರಾ ನೇರ ಫೈಟ್ ಮಾಡದೆ ಹಿಂಬಾಗಿಲಿನಿಂದ ರಾಜಕಾರಣ ಮಾಡುವ ವ್ಯಕ್ತಿ ಅಂತೆಲ್ಲಾ ಗುಡುಗಿದ್ದರು. ಜೊತೆಗೆ ಇವರಿಬ್ಬರ ನಡುವೆ ಹಿಂದೆ, ಸಿಡಿ ಯುದ್ಧವೇ ಜರುಗಿತ್ತು. ಇದೀಗ ಕಾಂಗ್ರೆಸ್ ಸರಕಾರ ಬಂದ ಬಳಿಕ ಮತ್ತೊಮ್ಮೆ ಇವರಿಬ್ಬರ ನಡುವೆ ಇದ್ದ ಮುಸುಕಿನ ಗುದ್ದಾಟ ಬೆಳಕಿಗೆ ಬಂದಿದೆ.