ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗ್ಗಿನ ಉಪಾಹಾರ ನಮ್ಮ ಇಡೀ ದಿನವನ್ನು ನಿರ್ಧಾರ ಮಾಡುವಂತಹದ್ದು. ಈ ಸತ್ಯ ನಿಮಗೆ ಗೊತ್ತೇ? ಅನೇಕ ಮಂದಿ ಸರಿಯಾಗಿ ಉಪಾಹಾರ ಸೇವಿಸದೆ ಕೆಲಸಕ್ಕೆ ತೆರಳುತ್ತಾರೆ. ಇನ್ನು ಕೆಲವು ಮಂದಿ ಉದಾಸೀನದಿಂದ ಉಪಾಹಾರ ಮಾಡದೆ ದಿನ ಕಳೆಯುತ್ತಾರೆ. ಅನೇಕರು ಮನೆಯಲ್ಲಿರುವ ಬಿಸ್ಕತ್ತುಗಳನ್ನು ಚಹಾದೊಂದಿಗೆ ಸೇವಿಸುತ್ತಾರೆ. ಇದೆಲ್ಲವೂ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿರುವಂತಹುದು. ಬೆಳಗ್ಗೆ ಟೀ ಅಥವಾ ಕಾಫಿಯ ಜೊತೆಗೆ ಬಿಸ್ಕಿಟ್ ಮಾತ್ರ ಸೇವಿಸಲೇ ಬೇಡಿ. ಬಿಸ್ಕತ್ ಸೇವನೆಯಿಂದ ಆರೋಗ್ಯಕ್ಕೆ ತೀವ್ರ ಹಾನಿಯಾಗುತ್ತದೆ.
ದೇಹಕ್ಕೆ ಹಿತವಾಗುವ, ಮನಸ್ಸಿಗೆ ಮುದ ನೀಡುವ ಉತ್ತಮ ಪೌಷ್ಠಿಕಾಂಶ ಹೊಂದಿದ ಆಹಾರ ಸೇವನೆ ಮಾಡಿದ್ದೇ ಆದರಲ್ಲಿ ಇಡೀ ದಿನ ದೇಹ ಉಲ್ಲಾಸದಿಂದ ಕೂಡಿರುತ್ತದೆ. ನಮ್ಮೆಲ್ಲಾ ಚಟುವಟಿಕೆಗಳು ನಿರಾತಂಕವಾಗಿ ಸಾಗಲು ಸಹಕಾರಿಯಾಗುತ್ತದೆ. ಬೆಳ್ಳಂಬೆಳಗ್ಗೆ ಅನೇಕರಿಗೆ ಬೆಡ್ ಟೀ ಕುಡಿಯುವ ಹವ್ಯಾಸ. ಟೀ ಜೊತೆಗೆ ಬಿಸ್ಕತ್ ತಿನ್ನುವುದೂ ರೂಢಿ. ಈ ಅಭ್ಯಾಸಗಳನ್ನು ತಪ್ಪಿಸಲೇ ಸಾಧ್ಯವಿಲ್ಲ ಎಂಬಂತೆ ಅನೇಕರಿಗೆ ಚಟವಾಗಿ ಪರಿಣಮಿಸಿರುತ್ತದೆ.
ಇದರಿಂದ ಅನೇಕ ರೋಗಗಳು ಉಂಟಾಗುತ್ತವೆ. ಅಸಿಡಿಟಿ, ಜೀರ್ಣ ಕ್ರಿಯೆಯ ತೊಂದರೆಗಳು ಉಂಟಾಗುತ್ತವೆ. ಹೊಟ್ಟೆ ಹಾಗೂ ಕರುಳಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎನ್ನುವುದು ಸಂಶೋಧನೆಗಳಿಂದ ದೃಢಪಟ್ಟಿವೆ. ಮೈದಾ ಹಿಟ್ಟು ಅಥವಾ ಸಂಸ್ಕರಿಸಿದ ಹಿಟ್ಟಿನಿಂದ ಬಿಸ್ಕಿಟ್ ತಯಾರು ಮಾಡಲಾಗುತ್ತದೆ.
ಆದ್ದರಿಂದ ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಜೊತೆಗೆ ಬಿಸ್ಕೇಟ್ ತಿನ್ನುವುದರಿಂದ ಕರುಳಿನ ಸಮಸ್ಯೆ ತಲೆದೋರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಟೀ ಹಾಗೂ ಬಿಸ್ಕತ್ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುವುದಲ್ಲದೆ ಡಯಾಬಿಟಿಸ್ ಉಂಟಾಗಲೂ ಕಾರಣವಾಗುತ್ತದೆ. ಮಲಬದ್ಧತೆಯಂತಹ ಕಾಯಿಲೆಗಳು ಕೂಡಾಉಂಟಾಗುತ್ತವೆ ಎಂದು ತಿಳಿದು ಬಂದಿದೆ.