ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡೂವರೆ ವರ್ಷಗಳ ಅಂತರದ ಬಳಿಕ ಬೆಂಗಳೂರಿನಲ್ಲಿ ವಾಹನಗಳ ಟೋಯಿಂಗ್ ಕಾರ್ಯವನ್ನು ಪುನರಾರಂಭಗೊಂಡಿದ್ದು, ಇನ್ನು ಮುಂದೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ ಭರ್ಜರಿ ದಂಡ ಬೀಳಲಿದೆ.
ಆರಂಭಿಕವಾಗಿ ಮೆಜೆಸ್ಟಿಕ್ ಹಾಗೂ ಗಾಂಧಿನಗರ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ಸಮಸ್ಯೆಯ ಪರಿಹಾರಕ್ಕಾಗಿ ಆದ್ಯತೆ ಮೇರೆಗೆ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಟೋಯಿಂಗ್ ಆರಂಭಿಸಲಾಗಿದೆ.
ಟೋಯಿಂಗ್ ವಾಹನ ಸಿಬ್ಬಂದಿಯಿಂದ ವಾಹನ ಚಾಲಕರಿಗೆ ಕಿರುಕುಳ ನೀಡುತ್ತಿರುವ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ 2022 ಫೆಬ್ರವರಿ ತಿಂಗಳಿನಲ್ಲಿ ವಾಹನಗಳ ಟೋಯಿಂಗ್’ಗೆ ನಿಷೇಧ ಹೇರಲಾಗಿತ್ತು. ಇದಾದ ಬಳಿಕಗಾಂಧಿನಗರದ ಎಲ್ಲಾ ರಸ್ತೆಗಳನ್ನು ‘ನೋ ಪಾರ್ಕಿಂಗ್’ ಝೋನ್ ಎಂದು ಘೋಷಿಸಲಾಯಿತು.
ಕಾಳಿದಾಸ ರಸ್ತೆ, ಗಾಂಧಿನಗರ ಮುಖ್ಯರಸ್ತೆ ಮತ್ತು ಇತರ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ನೋ ಪಾರ್ಕಿಂಗ್ ಫಲಕಗಳನ್ನು ಅಳವಡಿಸಿದ್ದಾರೆ. ಅಲ್ಲದೆ, ಸ್ವಾತಂತ್ರ್ಯ ಉದ್ಯಾನದ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲಿ ಪಾರ್ಕಿಂಗ್ ಸೌಲಭ್ಯ ಆರಂಭಿಸಲಾಗಿದೆ. ಆದರೆ, ಇದರ ಬಗ್ಗೆ ಜನರು ಆಸಕ್ತಿ ತೋರಿಸುತ್ತಿಲ್ಲ. ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲಿವಾಹನ ನಿಲುಗಡೆಗೆ ಸವಾರರು ಹಿಂದೇಟು ಹಾಕುತ್ತಿದ್ದಾರೆ.
ಮೆಜೆಸ್ಟಿಕ್ ಮತ್ತು ಗಾಂಧಿನಗರ ಸುತ್ತಮುತ್ತ ಹೋಟೆಲ್‌ಗಳು, ವಕೀಲರ ಕಚೇರಿಗಳು, ಬಟ್ಟೆ ಮಳಿಗೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶಾಪಿಂಗ್, ಆಹಾರ ಸೇವನೆಗೆ ಹಾಗೂ ಕಾನೂನು ಕೆಲಸಕ್ಕಾಗಿ ಈ ಭಾಗಕ್ಕೆ ಬರುವ ವಾಹನ ಸವಾರರು, ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳಲ್ಲಿ ವಾಹನ ನಿಲ್ಲಿಸುವ ಪ್ರವೃತ್ತಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಗಾಡಿ ನಿಲ್ಲಿಸಿದರೆ ಗಾಡಿ ಟೋಯಿಂಗ್ ಮಾಡಲಾಗುತ್ತದೆ. ಭಾರೀ ದಂಡ ನೀಡಬೇಕಾಗುತ್ತದೆ. ಹೀಗಾಗಿ ಪಾರ್ಕಿಂಗ್ ಬಗ್ಗೆ ಗಮನ ಇರಲಿ..