ಹಾಗಲಕಾಯಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಷಯ ಎಲ್ಲರಿಗೂ ಗೊತ್ತಿರೋದೆ, ಬಟ್ ಹಾಗಲಕಾಯಿ ಕೂದಲ ಆರೋಗ್ಯಕ್ಕೆ ಸಹಕಾರಿ ಅನ್ನೋ ಮಾಹಿತಿ ಗೊತ್ತಿತ್ತಾ?
ಕೂದಲು ಉದುರುವಿಕೆ ತಡೆಯಲು ಹಾಗಲಕಾಯಿ ರಸ ಹಚ್ಚಿಕೊಳ್ಳಲು ಸಲಹೆ : ಅರ್ಧ ಕಪ್ ಹಾಗಲಕಾಯಿ ರಸವನ್ನು ತೆಗೆದುಕೊಂಡು ಅದಕ್ಕೆ ಒಂದು ಟೀಸ್ಪೂನ್ ತೆಂಗಿನ ಎಣ್ಣೆ ಮಿಶ್ರಣ ಮಾಡಿ. ಬಳಿಕ ಈ ಮಿಶ್ರಣವನ್ನು ನಿಮ್ಮ ನೆತ್ತಿ ಹಾಗೂ ಕೂದಲಿಗೆ ಹಚ್ಚಿ ಹತ್ತು ನಿಮಿಷಗಳ ಕಾಲ ಮಸಾಜ್ ಮಾಡಬೇಕಾಗುತ್ತದೆ. ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಈ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಹಾಯ ಆಗುತ್ತದೆ.
ಕೂದಲು ಸ್ಪ್ಲಿಟ್ ಆಗುವುದನ್ನು ತಡೆಯುತ್ತೆ : ನಾವು ಬಳಸುವ ಕೂದಲಿನ ಉತ್ಪನ್ನಗಳಲ್ಲಿನ ರಾಸಾಯನಿಕಗಳು ಹಾಗೂ ಬಾಹ್ಯ ಮಾಲಿನ್ಯದ ಪರಿಣಾಮಗಳಿಂದಾಗಿ ಕೂದಲುಗಳು ಸ್ಪ್ಲಿಟ್ ಆಗುವುದನ್ನು ತಡೆಗಟ್ಟಲು ಹಾಗಲಕಾಯಿ ರಸವನ್ನು ಕೂದಲಿನ ಬೇರುಗಳಿಗೆ ಹಚ್ಚಿ ಹಾಗೆಯೇ ಬಿಡಬೇಕಾಗುತ್ತದೆ. ಸುಮಾರು 40 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕಾಗುತ್ತದೆ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಮೂರು ವಾರಗಳಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ.
ತಲೆಹೊಟ್ಟು ಮಾಯ : ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಲು, ಸ್ವಲ್ಪ ಜೀರಿಗೆ ಬೀಜಗಳನ್ನು ತೆಗೆದುಕೊಂಡು ಅದರಿಂದ ಪೇಸ್ಟ್ ತಯಾರಿಸಿ. ತಯಾರಾದ ಪೇಸ್ಟ್ ಅನ್ನು ಹಾಗಲಕಾಯಿ ರಸದೊಂದಿಗೆ ಸೇರಿಸಿ ನೆತ್ತಿಗೆ ಹಚ್ಚಿಕೊಳ್ಳಿ. ಇದನ್ನು 15 ರಿಂದ 20 ನಿಮಿಷಗಳವರೆಗೆ ಹಾಗೆಯೇ ಬಿಡಬೇಕಾಗುತ್ತದೆ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರದಲ್ಲಿ ಎರಡರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.
ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ : ಹಾಗಲಕಾಯಿ ರಸವನ್ನು ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿ ಒಂದು ಗಂಟೆ ಬಿಡಿ. ಬಳಿಕ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ಇದನ್ನು ಕೆಲವು ದಿನಗಳವರೆಗೆ ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಒಣ ಕೂದಲಿಗೆ ಉತ್ತಮ : ನಮ್ಮಲ್ಲಿ ಹಲವರ ಕೂದಲು ಒಣಗಿದಂತೆ ಕಾಣುತ್ತದೆ. ಅಂತಹ ಜನರು ಅರ್ಧ ಕಪ್ ಹಾಗಲಕಾಯಿ ರಸ ಹಾಗೂ ಮೊಸರು ಹಚ್ಚಿಕೊಳ್ಳಬೇಕಾಗುತ್ತದೆ. ಇದಕ್ಕೆ ಎರಡು ಟೀಸ್ಪೂನ್ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೆಕಾಗುತ್ತದೆ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ನಿಧಾನವಾಗಿ ಮಸಾಜ್ ಮಾಡಿ. ನಿಮ್ಮ ಕೂದಲಿಗೆ ಹಚ್ಚಿ ಅರ್ಧ ಗಂಟೆಯವರೆಗೆ ಬಿಡಬೇಕಾಗುತ್ತದೆ. ಬಳಿಕ ನಿಮ್ಮ ಕೂದಲನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಆಗಾಗ್ಗೆ ಮಾಡುವುದರಿಂದ ನಿಮ್ಮ ಕೂದಲು ತೇವಾಂಶದಿಂದ ಕೂಡಿರುತ್ತದೆ.