ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅಂದ್ರೆ ಕೇವಲ ನಟನೆಯಲ್ಲ, ಅವರೊಂದು ಸ್ಟೈಲ್ ಐಕಾನ್. ಆದರೆ ಅವರ ಈ ಸ್ಟೈಲ್ ಮತ್ತು ಪರ್ಫೆಕ್ಷನ್ ಹಿಂದೆ ಒಂದು ವಿಚಿತ್ರವಾದ ಅಭ್ಯಾಸ ಅಡಗಿದೆ ಅನ್ನೋದು ಈಗ ಬಯಲಾಗಿದೆ. ಶಾರುಖ್ ಖಾನ್ ಅವರು ಒಬ್ಬ ವ್ಯಕ್ತಿಯನ್ನು ಜಡ್ಜ್ ಮಾಡುವುದು ಅವರ ಗುಣ ನೋಡಿಯಲ್ಲ, ಬದಲಿಗೆ ಅವರು ಧರಿಸಿರುವ ‘ಜೀನ್ಸ್ ಫಿಟ್ಟಿಂಗ್’ ನೋಡಿ!
ಇತ್ತೀಚೆಗೆ ‘ದಿ ಮನ್ಯಾವರ್ ಶಾದಿ ಶೋ’ನಲ್ಲಿ ಮಾತನಾಡಿದ ಖ್ಯಾತ ನಿರ್ದೇಶಕ ಕರಣ್ ಜೋಹರ್, ಕಿಂಗ್ ಖಾನ್ ಅವರ ಈ ಆಸಕ್ತಿದಾಯಕ ಫೋಬಿಯಾದ ಬಗ್ಗೆ ಕೆಲವು ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಕರಣ್ ಜೋಹರ್ ಹೇಳುವ ಪ್ರಕಾರ, ಶಾರುಖ್‌ಗೆ ಜೀನ್ಸ್ ವಿಷಯದಲ್ಲಿ ಒಂದು ರೀತಿಯ OCD ಇದೆಯಂತೆ. ಯಾರಾದರೂ ಅಸಹ್ಯವಾದ ಅಥವಾ ಸರಿಯಾದ ಫಿಟ್ಟಿಂಗ್ ಇಲ್ಲದ ಜೀನ್ಸ್ ಧರಿಸಿದ್ದರೆ, ಶಾರುಖ್ ಅವರಿಗೆ ಆ ವ್ಯಕ್ತಿಯ ಬಗ್ಗೆ ಅಷ್ಟಕ್ಕಷ್ಟೇ ಎಂಬ ಭಾವನೆ ಮೂಡುತ್ತದೆಯಂತೆ. “ನೀವು ಕೆಟ್ಟ ಜೀನ್ಸ್ ಧರಿಸಿದ್ದರೆ, ಅವರ ದೃಷ್ಟಿಯಲ್ಲಿ ನೀವು ಒಬ್ಬ ಕೆಟ್ಟ ವ್ಯಕ್ತಿ ಎಂದೇ ಅರ್ಥ!” ಎಂದು ಕರಣ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಸಂಗತಿ ಎಷ್ಟರ ಮಟ್ಟಿಗಿದೆ ಎಂದರೆ, ಕರಣ್ ಜೋಹರ್ ಸ್ವತಃ ಶಾರುಖ್ ಮನೆ ‘ಮನ್ನತ್’ಗೆ ಹೋಗುವಾಗ ಜೀನ್ಸ್ ಧರಿಸಲು ಭಯಪಡುತ್ತಾರಂತೆ. ಒಂದು ವೇಳೆ ಜೀನ್ಸ್ ಹಾಕಿದ್ದರೂ, ಶಾರುಖ್ ಅವರ ತೀಕ್ಷ್ಣ ನೋಟವನ್ನು ಎದುರಿಸಲಾಗದೆ ಸಮಜಾಯಿಷಿ ನೀಡಬೇಕಾದ ಪರಿಸ್ಥಿತಿ ಅವರಿಗೆ ಎದುರಾಗುತ್ತದೆಯಂತೆ.
ವಿಶೇಷವೆಂದರೆ ಶಾರುಖ್‌ಗೆ ಈ ಅಭ್ಯಾಸ ಹತ್ತಿಸಿದ್ದು ಇದೇ ಕರಣ್ ಜೋಹರ್! ಅದು 1994ರ ಕಾಲ. ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ಕರಣ್ ಅಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಶಾರುಖ್ ಅವರ ಕಾಸ್ಟ್ಯೂಮ್ ಜವಾಬ್ದಾರಿ ಕರಣ್ ಮೇಲಿತ್ತು. ಆಗ ಶಾರುಖ್‌ಗೆ ಒಂದು ನಿರ್ದಿಷ್ಟ ಬ್ರಾಂಡ್‌ನ ಫಿಟ್ಟಿಂಗ್ ಜೀನ್ಸ್ ಧರಿಸುವಂತೆ ಕರಣ್ ಬಲವಂತ ಮಾಡಿದ್ದರು.
ಆರಂಭದಲ್ಲಿ ಶಾರುಖ್ ಇದನ್ನು ವಿರೋಧಿಸಿದ್ದರು. “ಈ ಹುಡುಗನಿಗೆ ಏನಾಗಿದೆ? ಯಾಕೆ ನನಗಿಷ್ಟು ಕಾಟ ಕೊಡುತ್ತಿದ್ದಾನೆ?” ಎಂದು ನಿರ್ದೇಶಕ ಆದಿತ್ಯ ಚೋಪ್ರಾ ಬಳಿ ದೂರನ್ನೂ ಕೊಂಡೊಯ್ದಿದ್ದರು. ಆದರೆ ಆದಿತ್ಯ ಚೋಪ್ರಾ ಅವರು, “ಕರಣ್ ಸೌತ್ ಬಾಂಬೆಯಿಂದ ಬಂದವನು, ಅವನಿಗೆ ಫ್ಯಾಷನ್ ಸೆನ್ಸ್ ಚೆನ್ನಾಗಿರುತ್ತೆ, ಅವನು ಹೇಳಿದ ಹಾಗೆ ಕೇಳು” ಎಂದು ಸಲಹೆ ನೀಡಿದ್ದರು. ಅಂದು ಕರಣ್ ಹಚ್ಚಿದ ಆ ‘ಜೀನ್ಸ್ ಹವ್ಯಾಸ’ ಇಂದು ಶಾರುಖ್ ಅವರ ವ್ಯಕ್ತಿತ್ವದ ಭಾಗವಾಗಿ ಬಿಟ್ಟಿದೆ.

