Do You Know | ಕೆಲವರು ಜ್ವರ ಬಂದಾಗ ಗೊಣಗೋದು ಯಾಕೆ ಗೊತ್ತಾ?

ಜ್ವರ ಬಂದಾಗ ಕೆಲವರು ಗೊಣಗುವುದು, ಅಸ್ಪಷ್ಟವಾಗಿ ಮಾತನಾಡುವುದು ಅಥವಾ ವಿಚಿತ್ರವಾಗಿ ವರ್ತಿಸುವುದು ಅನೇಕರಿಗೆ ಆತಂಕ ಉಂಟುಮಾಡುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ಇದು ಕೇವಲ ಜ್ವರದ ಪರಿಣಾಮವಲ್ಲ, ಮೆದುಳಿನ ಮೇಲೂ ಜ್ವರದ ಪ್ರಭಾವ ಬೀರುವುದರಿಂದ ಉಂಟಾಗುವ ಲಕ್ಷಣ.

ಜ್ವರ ಹೆಚ್ಚಾದಾಗ ದೇಹದ ಉಷ್ಣತೆ 102°F ಅಥವಾ 103°F ಗಿಂತ ಹೆಚ್ಚು ಏರಬಹುದು. ಈ ಸಂದರ್ಭ ದೇಹ ಮಾತ್ರವಲ್ಲದೆ ಮೆದುಳು ಸಹ ಬಿಸಿಯಾಗುತ್ತದೆ. ಮೆದುಳಿನ ನರಕೋಶಗಳು ಗೊಂದಲಕ್ಕೆ ಒಳಗಾಗುವುದರಿಂದ ಯೋಚನೆ, ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕುಂದುತ್ತದೆ. ಇದೇ ಕಾರಣದಿಂದ ಕೆಲವರು ಅಸ್ಪಷ್ಟವಾಗಿ ಮಾತನಾಡುವುದು, ಪರಿಚಿತರ ಹೆಸರುಗಳನ್ನು ಮರೆತು ಬಿಡುವುದು ಅಥವಾ ಅಸಹಜ ವರ್ತನೆ ತೋರಿಸುವುದು ಸಾಮಾನ್ಯ. ಇದನ್ನು ವೈದ್ಯಕೀಯದಲ್ಲಿ “ಡೆಲಿರಿಯಮ್” (Delirium) ಎಂದು ಕರೆಯಲಾಗುತ್ತದೆ.

ತಜ್ಞರ ಪ್ರಕಾರ, ಹೆಚ್ಚಿದ ಜ್ವರದ ಸಮಯದಲ್ಲಿ ಕೆಲವರಿಗೆ ಭ್ರಮೆ ಉಂಟಾಗಬಹುದು, ಯಾವುದೋ ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ ಅನ್ನಿಸುವಂತೆ ಭಾಸವಾಗಬಹುದು. ದೇಹದ ದಣಿವಿನ ಜೊತೆಗೆ ಔಷಧದ ಪರಿಣಾಮವೂ ಸೇರಿ, ಮನಸ್ಸು ಅರ್ಧ ನಿದ್ರೆಯಲ್ಲೂ ಅರ್ಧ ಎಚ್ಚರದಲ್ಲೂ ಇರುವಂತ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲೇ ಗೊಣಗುವಿಕೆ ಹೆಚ್ಚಾಗಿ ಗೋಚರಿಸುತ್ತದೆ.

ಜ್ವರ ಬಂದಾಗ ಗೊಣಗುವಿಕೆ ಅಥವಾ ವಿಚಿತ್ರ ವರ್ತನೆ ಭಯಪಡಬೇಕಾದ ವಿಷಯವಲ್ಲ. ಇದು ಹೆಚ್ಚಿನ ಉಷ್ಣತೆಯ ಪರಿಣಾಮವಾಗಿ ಮೆದುಳಿನ ನರಕೋಶಗಳಲ್ಲಿ ಉಂಟಾಗುವ ತಾತ್ಕಾಲಿಕ ಬದಲಾವಣೆ. ಆದರೂ ಜ್ವರ ನಿಯಂತ್ರಣಕ್ಕೆ ಬಾರದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ. ಸರಿಯಾದ ಚಿಕಿತ್ಸೆ ಪಡೆದರೆ ಈ ರೀತಿಯ ಸಮಸ್ಯೆಗಳು ತಕ್ಷಣ ಸರಿಹೋಗುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!