ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರಿಗೂ ಆನೆಗಳ ಬಗ್ಗೆ ಅಪಾರ ಪ್ರೀತಿ ಇದೆ. ಆನೆಗಳ ಸ್ವಭಾವ, ದೈತ್ಯಾಕಾರದ ದೇಹ ಮತ್ತು ಮುಗ್ಧ ನೋಟ ಜನರನ್ನು ಸೆಳೆಯುತ್ತದೆ. ಆದರೆ ಯಾವತ್ತಾದರೂ ಒಂದು ಬಾರಿ ಯೋಚಿಸಿದ್ದೀರಾ? – ಇಷ್ಟು ಬೃಹತ್ ಶರೀರವಿರುವ ಆನೆಗೆ ಇಷ್ಟೊಂದು ದೊಡ್ಡದಾದ ಕಿವಿ ಯಾಕೆ ಬೇಕು ಅಂತ? ಇದು ಕೇವಲ ಆನೆಗೆ ಒಂದಿಷ್ಟು ಚೆಲುವು ಕೊಡುವ ಶರೀರದ ರಚನೆಯಲ್ಲ, ಇದರ ಹಿಂದೆ ಒಂದು ಆಳವಾದ ವೈಜ್ಞಾನಿಕ ಕಾರಣವಿದೆ.
ಆನೆಗಳ ಕಿವಿಗಳು ಕೇವಲ ಕೇಳುವ ಸಾಧನವಾಗಿಲ್ಲ. ಇದರ ಮುಖ್ಯ ಕಾರ್ಯವೇ ತಾಪಮಾನ ನಿಯಂತ್ರಣ – ಥರ್ಮೋ ರೆಗ್ಯುಲೇಷನ್. ವಿಶೇಷವಾಗಿ ಆಫ್ರಿಕಾದಂತಹ ಬಿಸಿ ಹವಾಮಾನದಲ್ಲಿ ಇರುವ ಆನೆಗಳಿಗೆ, ದೇಹದ ಉಷ್ಣತೆ ಕಡಿಮೆ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ. ಈ ಸಮಸ್ಯೆಗೆ ಬೆಂಬಲ ನೀಡುವಂತದ್ದು ಅವರ ದೊಡ್ಡದಾದ ಕಿವಿಗಳೇ.
ಆಫ್ರಿಕನ್ ಆನೆಗಳ ಕಿವಿಗಳು ಕೆಲವೊಮ್ಮೆ 6.6 ಅಡಿ ಉದ್ದವಿರುತ್ತವೆ. ಇದಕ್ಕೆಲ್ಲ ಕಾರಣ – ಶಾಖವನ್ನು ಹೊರಹಾಕುವ ರಕ್ತನಾಳಗಳ ಅಸ್ತಿತ್ವ. ದೇಹದಿಂದ ಬರುವ ಬೆಚ್ಚಗಿನ ರಕ್ತ, ಈ ಕಿವಿಗಳ ಮೂಲಕ ಹರಿದಾಗ, ಗಾಳಿಯ ಸ್ಪರ್ಶದಿಂದ ತಂಪಾಗುತ್ತದೆ. ಈ ತಂಪಾದ ರಕ್ತ ಮರಳಿ ದೇಹಕ್ಕೆ ಹರಿದು ದೇಹದ ತಾಪಮಾನವನ್ನು ಸಮಸ್ಥಿತಿಯಲ್ಲಿ ಇಡುತ್ತದೆ.
ಅಷ್ಟರಲ್ಲಿ ಕಿವಿಗಳನ್ನು ಅಲ್ಲಾಡಿಸುವ ಆನೆಗಳ ದೃಶ್ಯ ನಿಮಗೆ ನೆನಪಾಗುತ್ತಾ? ಹೌದು, ಇದು ಕೇವಲ ದೊಡ್ಡ ಶಬ್ದ ಕೇಳಿದಂತೆ ಅಲ್ಲಾಡಿಸುವ ಅಭ್ಯಾಸವಲ್ಲ. ಆನೆಗಳು ಗಾಳಿಯ ಹರಿವನ್ನು ಹೆಚ್ಚಿಸಿ ತಮ್ಮನ್ನು ತಾವೇ ತಂಪಾಗಿಸುತ್ತಿದ್ದಾರೆ. ಬಿಸಿಲು ತೀವ್ರವಾಗಿರುವಾಗ ಈ ಕಿವಿಗಳು ಫ್ಯಾನ್ ನಂತೆ ಕೆಲಸ ಮಾಡುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ!
ಅಷ್ಟಕ್ಕೂ ಭಾರತದಲ್ಲಿರುವ ಏಷಿಯನ್ ಆನೆಗಳ ಕಿವಿಗಳು ಆಫ್ರಿಕನ್ ಆನೆಗಳಿಗಿಂತ ಕಡಿಮೆ ಗಾತ್ರದಲ್ಲಿರುತ್ತವೆ. ಕಾರಣ – ಹವಾಮಾನ ವ್ಯತ್ಯಾಸ. ತೀವ್ರವಾದ ಶಾಖವಿಲ್ಲದ ಹವಾಮಾನದಲ್ಲಿ, ಥರ್ಮೋ ರೆಗ್ಯುಲೇಷನ್‌ಗೆ ಅಷ್ಟು ದೊಡ್ಡದಾದ ಕಿವಿಗಳ ಅಗತ್ಯವಿಲ್ಲ.
ಹೀಗಾಗಿ ಮುಂದೇನಾದರೂ ಆನೆಗಳನ್ನು ನೋಡಿದಾಗ, ಅವರ ಕಿವಿಗಳಿಗೂ ನಮಸ್ಕಾರ ಹೇಳಿ! ಏಕೆಂದರೆ, ಅವು ಕೇವಲ ಶ್ರವಣಾಂಗವಲ್ಲ – ಅದು ಆನೆಗಳ ತಾಪಮಾನ ನಿಯಂತ್ರಣ ಕೇಂದ್ರ ಕೂಡ ಹೌದು!