ವಾಲ್ಮೀಕಿ ನಿಗಮದಲ್ಲಿ ಎಷ್ಟು ಕೋಟಿ ಹಗರಣವಾಗಿತ್ತು ಗೊತ್ತಾ?: ಸ್ಫೋಟಕ ಮಾಹಿತಿ ನೀಡಿದ ಇಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಲ್ಮೀಕಿ ನಿಗಮದಲ್ಲಿ ಬರೋಬ್ಬರಿ 187 ಕೋಟಿ ರೂಪಾಯಿಯನ್ನು ಲೂಟಿ ಮಾಡಲಾಗಿದೆ ಎಂದು ವಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಎಷ್ಟು ಕೋಟಿ ರೂ.ಅವ್ಯವಹಾರವಾಗಿದೆ ಎಂದು ಹಲವರಿಗೆ ಗೊಂದಲವಾಗಿತ್ತು. ಇದೀಗ ಇದಕ್ಕೆ ಇಡಿ ಅಧಿಕೃತ ಅಂಕಿ-ಅಂಶಗಳನ್ನು ನೀಡಿದ್ದು, ಒಟ್ಟು 89.65 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಜಾರಿ ನಿರ್ದೇಶನಾಲಯದಿಂದ ವಿಸ್ತೃತ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ವಿಸ್ತೃತ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಾರಿ ನಿರ್ದೇಶನಾಲಯ, ವಾಲ್ಮೀಕಿ ಹಗರಣ ಸಂಬಂಧ ನಾಲ್ಕು ರಾಜ್ಯಗಳ 23 ಕಡೆ ದಾಳಿ ನಡೆಸಿದ್ದೇವೆ.18 ನಕಲಿ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದ್ದು, ನಂತರ ಹಲವು ನಕಲಿ ಅಕೌಂಟ್‌ಗಳಿಗೆ ಹೋಗಿ ಕ್ಯಾಶ್‌ ಆಗಿ ಮಾರ್ಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ನಾಗೇಂದ್ರ, ಬಸನಗೌಡ ದದ್ದಲ್‌ (ವಾಲ್ಮೀಕಿ ನಿಗಮದ ಅಧ್ಯಕ್ಷ) ಮನೆಯಲ್ಲಿ ದಾಖಲೆಗಳು ಪತ್ತೆಯಾಗಿವೆ ಎಂದು ಸ್ಪಷ್ಟಪಡಿಸಿದೆ.

ಮೇ 26ರಂದು ನಿಗಮದ ಉದ್ಯೋಗಿ ಚಂದ್ರಶೇಖರನ್‌ ಆತ್ಮಹತ್ಯೆಯ ಬಳಿಕ ರಾಜ್ಯ ಪೊಲೀಸರು ಹಾಗೂ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು. ಅಕ್ರಮದ ಬೆನ್ನತ್ತಿ ಹೊರಟಾಗ ಗಣನೀಯ ಪ್ರಮಾಣದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಲಾಗಿದೆ. ಇದರೊಂದಿಗೆ ಅಕ್ರಮದಲ್ಲಿ ಬಂದ ಇತರೇ ಹಣವನ್ನು ಬಳಸಿಕೊಂಡು ಲ್ಯಾಂಬೋರ್ಗಿನಿ ಸೇರಿದಂತೆ ಐಷಾರಾಮಿ ವಾಹನಗಳನ್ನ ಖರೀದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಮಾಜಿ ಸಚಿವ ನಾಗೇಂದ್ರ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ನಗದು ನಿರ್ವಹಣೆಯಲ್ಲಿ ತೊಡಗಿದ್ದ ಸಹವರ್ತಿಗಳ ಬಗ್ಗೆಯೂ ಮಾಹಿತಿ ಬಯಲಾಗಿದೆ. ಅಷ್ಟೇ ಅಲ್ಲದೇ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರ ನಿವಾಸದಲ್ಲಿ ಅಕ್ರಮ ಹಣ ನಿರ್ವಹಣೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಪತ್ತೆಯಾಗಿವೆ. ಆ ನಂತರ ನಾಗೇಂದ್ರ ಅವರನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್‌ ಜು.18ರ ವರೆಗೆ ಇಡಿ ಕಸ್ಟಡಿಗೆ ನೀಡಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಜಾರಿ ನಿರ್ದೇಶನಾಲಯ ವಿಸ್ತೃತ ಮಾಧ್ಯಮ ಪ್ರಕಟಣೆ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!