ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿರುವ ‘ಮಹಾವತಾರ ನರಸಿಂಹ’ ಸಿನಿಮಾ ಕೇವಲ 16 ದಿನಗಳಲ್ಲಿ 169 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿ, ಈ ವರ್ಷದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಅನಿಮೇಷನ್ ಸಿನಿಮಾ, ವಿಷ್ಣುವಿನ ನಾಲ್ಕನೇ ಅವತಾರದ ಕಥೆಯನ್ನು ವಿಶಿಷ್ಟ ಶೈಲಿಯಲ್ಲಿ ಪ್ರೇಕ್ಷಕರಿಗೆ ಪರಿಚಯಿಸಿದೆ. ಈ ಚಿತ್ರವನ್ನು ಕೇವಲ ಹಿಂದು ಪ್ರೇಕ್ಷಕರು ಮಾತ್ರವಲ್ಲದೆ, ವಿವಿಧ ಧರ್ಮ ಮತ್ತು ಸಮುದಾಯಗಳ ಜನರು ಸಮಾನವಾಗಿ ಮೆಚ್ಚಿದ್ದಾರೆ.
ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ಅಶ್ವಿನ್ ಕುಮಾರ್, ಚಿತ್ರದ ಯಶಸ್ಸಿನ ಹಿನ್ನಲೆ ಹಾಗೂ ನಿರ್ಮಾಣ ಪ್ರಕ್ರಿಯೆಯ ಬಗ್ಗೆ ಮಾತನಾಡಿದರು. “ಒಂದು ಸಿನಿಮಾ ಮೊದಲ ವಾರದಲ್ಲೇ 100 ಕೋಟಿ ಗಳಿಸುವುದು ಅಸಾಮಾನ್ಯ ಸಂತೋಷ ನೀಡುತ್ತದೆ. ಇಷ್ಟು ದೊಡ್ಡ ಮಟ್ಟದ ಪ್ರತಿಕ್ರಿಯೆ ಬರುತ್ತದೆ ಎಂದು ನಾವು ಊಹಿಸಿರಲಿಲ್ಲ. ನಮ್ಮ ದೇಶದ ವೈವಿಧ್ಯತೆ, ಸಂಸ್ಕೃತಿ ಹಾಗೂ ಭಾವನೆಗಳ ಸಮನ್ವಯವೇ ಈ ಚಿತ್ರದ ಯಶಸ್ಸಿನ ಪ್ರಮುಖ ಕಾರಣ” ಎಂದು ಅವರು ಹೇಳಿದರು.
ಅವರು ಮುಂದುವರಿದು, “ಭಾರತದಲ್ಲಿ ಅನೇಕರು ಅನಿಮೇಷನ್ ಚಿತ್ರಗಳು ಮಕ್ಕಳಿಗಷ್ಟೆ ಎಂದು ಭಾವಿಸುತ್ತಿದ್ದರು. ಆದರೆ ‘ಮಹಾವತಾರ ನರಸಿಂಹ’ ಆ ಕಲ್ಪನೆಯನ್ನು ಸಂಪೂರ್ಣ ಬದಲಿಸಿದೆ. ನಾವು ಪ್ರೇಕ್ಷಕರಿಗೆ ಭವ್ಯ ಹಾಗೂ ತಾಂತ್ರಿಕವಾಗಿ ಉನ್ನತ ಮಟ್ಟದ ಅನುಭವ ನೀಡಿದ್ದೇವೆ. ನರಸಿಂಹನ ಎಂಟು ತೋಳುಗಳು, ಯುದ್ಧ ದೃಶ್ಯಗಳು ಹಾಗೂ ಪ್ರಳಯದ ಚಿತ್ರಣವನ್ನು ನೇರ ಚಿತ್ರೀಕರಣದಲ್ಲಿ ತೋರಿಸುವುದು ಕಷ್ಟಕರವಾಗುತ್ತಿತ್ತು. ಅನಿಮೇಷನ್ ಮಾಧ್ಯಮದಲ್ಲಿ ಕಲ್ಪನೆಗೆ ಮಿತಿಯಿಲ್ಲ, ಕಥೆಗೆ ಶಕ್ತಿ ಇದ್ದರೆ ಪ್ರೇಕ್ಷಕರು ಅದನ್ನು ಹೃದಯದಿಂದ ಸ್ವೀಕರಿಸುತ್ತಾರೆ” ಎಂದರು.
ಅಶ್ವಿನ್ ಕುಮಾರ್ ಬಜೆಟ್ ಕುರಿತು ಸ್ಪಷ್ಟನೆ ನೀಡುತ್ತಾ, “ಕೆಲವರು ಈ ಚಿತ್ರವನ್ನು 15 ಕೋಟಿ ರೂ. ಬಜೆಟ್‌ನಲ್ಲಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ನಿಜವಾದ ಬಜೆಟ್ 40 ಕೋಟಿ ರೂ., ಇದರಲ್ಲಿ ಮಾರ್ಕೆಟಿಂಗ್ ವೆಚ್ಚವೂ ಸೇರಿದೆ. ಇಚ್ಛಾಶಕ್ತಿ ಮತ್ತು ದೃಢನಿಶ್ಚಯ ಇದ್ದರೆ ಕಡಿಮೆ ಬಜೆಟ್‌ನಲ್ಲಿಯೂ ಉತ್ತಮ ಚಿತ್ರವನ್ನು ಮಾಡಬಹುದು ಎಂಬುದಕ್ಕೆ ಇದೇ ಸಾಕ್ಷಿ” ಎಂದರು.
‘ಮಹಾವತಾರ ನರಸಿಂಹ’ ಭಾರತೀಯ ಚಲನಚಿತ್ರೋದ್ಯಮಕ್ಕೆ ಹೊಸ ದಾರಿ ತೆರೆದಂತಾಗಿದೆ. ಇದು ಅನಿಮೇಷನ್ ಕೂಡಾ ಭವ್ಯ ಹಾಗೂ ಗಂಭೀರ ವಿಷಯಗಳನ್ನು ಹೊತ್ತೊಯ್ಯಬಲ್ಲ ಮಾಧ್ಯಮವೆಂದು ಸಾಬೀತುಪಡಿಸಿದೆ. ಹಾಲಿವುಡ್, ಚೀನಾ, ಜಪಾನ್‌ಗಳಂತೆ ಭಾರತದಲ್ಲೂ ಅನಿಮೇಷನ್ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಸೃಜನಾತ್ಮಕ ಪ್ರಯತ್ನಗಳು ನಡೆಯಲು ಈ ಯಶಸ್ಸು ಪ್ರೇರಣೆ ನೀಡಲಿದೆ.