ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾ. ಮನ್ಸುಖ್ ಮಾಂಡವೀಯ
(ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)
2017ರ ರಾಷ್ಟ್ರೀಯ ಆರೋಗ್ಯ ನೀತಿಯಡಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಗಂಭೀರ ಅಗತ್ಯತೆಯನ್ನು ಪೂರೈಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ 2018ರಲ್ಲಿ ಆಯುಷ್ಮಾನ್ ಭಾರತ್ ಕಾರ್ಯಕ್ರಮವನ್ನು ಆರಂಭಿಸಿತು. ಇದರ ಉದ್ದೇಶ ಪ್ರತಿಯೊಬ್ಬರಿಗೂ ಅವರು ಎಲ್ಲೇ ಇದ್ದರೂ ಅಥವಾ ಅವರ ಆರ್ಥಿಕ ಸ್ಥಿತಿಗತಿ ಏನೇ ಇದ್ದರೂ ಅದನ್ನು ಲೆಕ್ಕಿಸದೆ ಎಲ್ಲರಿಗೂ ಸಮಗ್ರ ಆರೋಗ್ಯ ರಕ್ಷಣಾ ಸೇವೆಗಳನ್ನು ಒದಗಿಸುವುದಾಗಿದೆ. ಆಯುಷ್ಮಾನ್ ಭಾರತ್ ವಿಭಾಗವಾರು ಆರೋಗ್ಯ ರಕ್ಷಣೆಯ ಬದಲಿಗೆ ಸಮಗ್ರ ಅಗತ್ಯತೆ ಆಧರಿಸಿದ ವಿಧಾನಕ್ಕೆ ಪರಿವರ್ತನೆಗೊಂಡಿತು. ಇದರಡಿ ಆರೋಗ್ಯ ಮತ್ತು ಯೋಗಕ್ಷೇಮ ಕೇಂದ್ರಗಳು(ಎಚ್ ಡಬ್ಲ್ಯೂಸಿಎಸ್) ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ(ಪಿಎಂ-ಜೆಎವೈ) ಗಳ ಮೂಲಕ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಮುನ್ನೆಚ್ಚರಿಕೆ ಮತ್ತು ಆರೈಕೆಯನ್ನು ಒದಗಿಸಲಾಗುವುದು.
ಆದರೆ ಇದು ಕೇವಲ ಆರೋಗ್ಯ ರಕ್ಷಣೆ ಕಾರ್ಯಕ್ರಮ ಮಾತ್ರವಲ್ಲ, ಇದರ ಗುರಿ ಭಾರತದ ಪ್ರತಿಯೊಬ್ಬರು ಅದರ ಪ್ರಯೋಜನ ಪಡೆಯಬೇಕು ಎಂಬುದಾಗಿದೆ. ಅದೇ ಉದ್ದೇಶಕ್ಕಾಗಿ ಆಯುಷ್ಮಾನ್ ಭವ ಎಂಬ ಹೊಸ ಅಭಿಯಾನವನ್ನು ಆರಂಭಿಸಲಾಗಿದೆ. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು, 2023ರ ಸೆಪ್ಟೆಂಬರ್ 13ರಂದು ಆಯುಷ್ಮಾನ್ ಭವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರಡಿ ಪಿಎಂ-ಜೆಎವೈ ಬಗ್ಗೆ ಗರಿಷ್ಠ ಪ್ರಮಾಣದ ಜಾಗೃತಿ ಮೂಡಿಸುವುದು , ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಐಡಿಗಳನ್ನು ಸೃಷ್ಟಿಸುವುದು ಮತ್ತು ನಮ್ಮ ಹಳ್ಳಿಗಳಲ್ಲಿ ಮತ್ತು ನಗರದ ವಾರ್ಡ್ ಪ್ರದೇಶಗಳಲ್ಲಿ ರೋಗಗಳ ತಪಾಸಣೆ ಮತ್ತು ಬಹು ವಿಧದ ಅನಾರೋಗ್ಯಗಳ ನಿರ್ವಹಣೆ ಸೇರಿದಂತೆ ಕ್ಷಯರೋಗ, ಅಧಿಕ ರಕ್ತದೊತ್ತಡ, ಸಿಕಲ್ ಸೆಲ್ ರೋಗ, ಮಧುಮೇಹ ಮತ್ತಿತರ ಕಾಯಿಲೆಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುವುದಾಗಿದೆ.
ಗ್ರಾಮಗಳನ್ನು ತಲುಪುವ ಉದ್ದೇಶವೇ ಆಯುಷ್ಮಾನ್ ಭವ ಅಭಿಯಾನದ ಉದ್ದೇಶ
ಆಯುಷ್ಮಾನ್ ಭವ ಅಭಿಯಾನದ ಮುಖ್ಯ ಉದ್ದೇಶ ದೇಶಾದ್ಯಂತ ಇರುವ 2.55 ಲಕ್ಷ ಗ್ರಾಮ ಪಂಚಾಯಿತಿಗಳು ಮತ್ತು 6.45 ಲಕ್ಷ ಗ್ರಾಮಗಳನ್ನು ತಲುಪುವುದಾಗಿದ್ದು, ಅದರಲ್ಲಿ ಜನತೆಗೆ ಆರೋಗ್ಯ ರಕ್ಷಣಾ ಸೇವೆಗಳ ಬಗ್ಗೆ ಅರಿವು ಖಾತ್ರಿಪಡಿಸುವುದಾಗಿದೆ. ಇದನ್ನು ಸಾರ್ವತ್ರಿಕ ಆರೋಗ್ಯ ವ್ಯಾಪ್ತಿಯಿಂದ ಯಾರೊಬ್ಬರೂ ಹೊರಗುಳಿಯದಂತೆ ನೋಡಿಕೊಳ್ಳಲು ಅಂತ್ಯೋದಯ ತತ್ವದಂತೆ ಈ ಅಭಿಯಾನವನ್ನು ರೂಪಿಸಲಾಗಿದೆ. ಗರಿಷ್ಠ ಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವುದು, ಅಂಗಾಂಗದಾನ ಸೇರಿದಂತೆ ಸೇವಾ ಸಪ್ತಾಹ, ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳ ಆಯೋಜನೆ ಮತ್ತಿತರ ಅಂಶಗಳು ಸೇರಿವೆ.
ಆರೋಗ್ಯ ಸೇವೆಗಳ ವಿತರಣೆಯನ್ನು ತಳಮಟ್ಟದಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಲವರ್ಧನೆಗೊಳಿಸಲು ಈ ಅಭಿಯಾನದಡಿ ಮೂರು ಪ್ರಮುಖ ಆಧಾರಸ್ಥಂಬಗಳೊಂದಿಗೆ ಆಯುಷ್ಮಾನ್ ಭಾರತ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ. ಅವುಗಳೆಂದರೆ ಆಯುಷ್ಮಾನ್ ಆಪ್ ಕೆ ದ್ವಾರ್ 3.0(ನಿಮ್ಮ ಮನೆ ಬಾಗಿಲಿಗೆ) ಆಯುಷ್ಮಾನ್, ಆಯುಷ್ಮಾನ್ ಸಭಾ ಮತ್ತು ಆಯುಷ್ಮಾನ್ ಮೇಳ, ಈ ಮೂರು ಆಧಾರಸ್ಥಂಬಗಳು ಸಾಮೂಹಿಕ ವ್ಯಾಪ್ತಿ, ಸಹಭಾಗಿತ್ವದ ಜಾಗೃತಿ ಮೂಡಿಸುವುದು ಮತ್ತು ಸಮುದಾಯ ಕೇಂದ್ರಿತ ಪ್ರಯತ್ನಗಳ ಮೂಲಕ ಸೇವಾ ವಿತರಣೆ ಖಾತ್ರಿಪಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ.
ಆಯುಷ್ಮಾನ್ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವುದು
ಆಯುಷ್ಮಾನ್ ಆಪ್ ಕೆ ದ್ವಾರ್ 3.0 ಅಡಿಯಲ್ಲಿ ಹಿಂದಿನ ಆವೃತ್ತಿಗಳ (1.0 ಮತ್ತು 2.0)ಯಶಸ್ಸಿನಂತೆ ಆಯುಷ್ಮಾನ್ ಕಾರ್ಡ್ ಗಳ ವಿತರಣೆಯನ್ನು ವಿಸ್ತರಿಸುವುದು ಹಾಗೂ ಆಯುಷ್ಮಾನ್ ಭಾರತ್ ಸೇವೆಗಳ ಬಳಕೆಯನ್ನು ವೃದ್ಧಿಸುವುದಾಗಿದೆ. ಆಯುಷ್ಮಾನ್ ಸಭಾದಡಿ ಭಾರತದಲ್ಲಿ ಲಭ್ಯವಿರುವ ನಾನಾ ಆರೋಗ್ಯ ರಕ್ಷಣಾ ಯೋಜನೆಗಳು ಮತ್ತು ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವಿದೆ. ಇದನ್ನು ಗ್ರಾಮ ಆರೋಗ್ಯ, ನೈರ್ಮಲೀಕರಣ, ಪೌಷ್ಠಿಕಾಂಶ (ವಿಎಚ್ಎಸ್ಎನ್ ಸಿ) ಸಮಿತಿಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು. ಆಯುಷ್ಮಾನ್ ಭವ ಉಪಕ್ರಮವನ್ನು ಮತ್ತಷ್ಟು ಮುಂದುವರಿಸುತ್ತಾ ಆರೋಗ್ಯ ಸಮಸ್ಯೆಗಳ ವಿಸ್ತೃತ ಆಯಾಮಗಳನ್ನು ಎದುರಿಸಲು ಆಯುಷ್ಮಾನ್ ಮೇಳಗಳನ್ನು ಪರಿಣಾಮಕಾರಿ ವೇದಿಕೆಗಳನ್ನಾಗಿ ಮಾಡಲಾಗುವುದು. ಅವು ದೊಡ್ಡ ಮಟ್ಟದ ಜನರನ್ನು ಪರಿಣಾಮಕಾರಿಯಾಗಿ ತಲುಪುವುದೇ ಅಲ್ಲದೆ, ಆರೋಗ್ಯ ರಕ್ಷಣಾ ಸೇವೆಗಳ ಬಳಕೆಯನ್ನು ಉತ್ತೇಜಿಸಲಾಗುವುದು.
‘ಆಯುಷ್ಮಾನ್ ಆಪ್ ಕೆ ದ್ವಾರ್’ ಉಪಕ್ರಮದಡಿ ಸೆಪ್ಟೆಂಬರ್ 17ರಿಂದ ಡಿಸೆಂಬರ್ 31ರ ವರೆಗೆ ದೇಶವ್ಯಾಪಿ ವಿಸ್ತೃತ ಅಭಿಯಾನವನ್ನು ಆರಂಭಿಸಲಾಗುವುದು. ಪಿಎಂ-ಜೆಎವೈ ಯೋಜನೆಯಡಿ ಸುಮಾರು 60 ಕೋಟಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಗಳ ವಿತರಣೆಯನ್ನು ಖಾತ್ರಿಪಡಿಸಲಾಗುವುದು. ಆಯುಷ್ಮಾನ್ ಆಪ್ ಕೆ ದ್ವಾರ್ ಮೂಲಕ ದೇಶದ ಪ್ರತಿಯೊಂದು ಅರ್ಹ ಕುಟುಂಬವೂ ಆಯುಷ್ಮಾನ್ ಕಾರ್ಡ್ ನಡಿ ನೋಂದಣಿಯಾಗಿರಬೇಕು. ಎಬಿ-ಪಿಎಂಜೆಎವೈ ಅಡಿ ಅವರಿಗೆ ಆರೋಗ್ಯ ಕಾರ್ಡ್ ಗಳ ವಿತರಣೆಯನ್ನು ಖಾತ್ರಿಪಡಿಸಬೇಕು. ಈ ಆಧಾರಸ್ಥಂಬದ ಪ್ರಾಥಮಿಕ ಉದ್ದೇಶವೆಂದರೆ ಪ್ರತಿಯೊಂದು ಅರ್ಹ ಕುಟುಂಬವೂ ತಮ್ಮ ಆಯುಷ್ಮಾನ್ ಕಾರ್ಡ್ ಸ್ವೀಕರಿಸಬೇಕು. ಕೈಗೆಟಕುವ ದರದ ಆರೋಗ್ಯ ರಕ್ಷಣಾ ಸೇವೆ ಲಭ್ಯತೆಯಿಂದ ಯಾರೋಬ್ಬರೂ ಹೊರಗುಳಿಯಬಾರದು ಎಂಬುದಾಗಿದೆ.
ಆಯುಷ್ಮಾನ್ ಸಭೆಗಳು 2023ರ ಅಕ್ಟೋಬರ್ 2 ರಂದು ಸಮಾವೇಶಗೊಳ್ಳಲಿದ್ದು, 2023ರ ಡಿಸೆಂಬರ್ 1ರ ವರೆಗೆ ಸಾಕಷ್ಟು ಸುತ್ತಿನಲ್ಲಿ ಸಭೆಗಳು ನಡೆಯಲಿವೆ. ಗ್ರಾಮಗಳು ಮತ್ತು ನಗರಗಳ ವಾರ್ಡ್ ಮಟ್ಟದಲ್ಲಿ ಆಯುಷ್ಮಾನ್ ಸಭೆಗಳು ಆರೋಗ್ಯ ರಕ್ಷಣಾ ಸೇವೆಗಳಿಗೆ ಸಂಬಂಧಿಸಿದಂತೆ ಜನರ ಆತಂಕಗಳು ಮಾತ್ರವಲ್ಲದೆ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ವೇದಿಕೆಗಳಾಗಲಿವೆ. ಜತೆಗೆ ಆರೋಗ್ಯ ರಕ್ಷಣಾ ಸೇವೆಗಳ ಬಗ್ಗೆ ಸಾಮಾಜಿಕ ಉತ್ತರದಾಯಿತ್ವವನ್ನು ಉತ್ತೇಜಿಸುತ್ತದೆ ಮತ್ತು “ಜನ ಭಾಗಿದಾರಿ ಸೆ ಜನ್ ಕಲ್ಯಾಣ್” ಎಂಬುದನ್ನು ಕಾರ್ಯರೂಪಗೊಳಿಸಲಿದೆ. ಈ ಸಭೆಗಳಲ್ಲಿ ಪಿಎಂ-ಜೆಎವೈ ಕಾರ್ಡ್ ಗಳ ವಿತರಣೆ, ನೋಂದಾಯಿತ ಆಸ್ಪತ್ರೆಗಳಲ್ಲಿ ಪ್ರದರ್ಶನ, ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಐಡಿಗಳ ಸೃಷ್ಟಿ, ತಪಾಸಣಾ ಸೇವೆಗಳು ಮತ್ತು ಸಂಸದರು/ಶಾಸಕರ ಪಾಲ್ಗೊಳ್ಳುವಿಕೆಯೊಂದಿಗೆ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಆರೋಗ್ಯ ಭಾಷಣಗಳನ್ನು ಆಯೋಜಿಸುವುದು, ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳ ಫಲಾನುಭವಿಗಳು ಮತ್ತು ಕ್ಷಯರೋಗ ಚಾಂಪಿಯನ್ ಗಳು ಮತ್ತು ಇತರೆ ಸಮುದಾಯವನ್ನು ಉತ್ತೇಜಿಸಲಾಗುವುದು.
ಆಯುಷ್ಮಾನ್ ಮೇಳಗಳು ಪ್ರತಿವಾರ 1.6 ಲಕ್ಷ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳಿರುವ ಗ್ರಾಮಗಳಲ್ಲಿ ನಿರಂತರವಾಗಿ ನಡೆಯುತ್ತವೆ ಮತ್ತು ಅವು ಬ್ಲಾಕ್ ಮಟ್ಟದಲ್ಲಿ ವೈದ್ಯಕೀಯ ಕಾಲೇಜುಗಳು ಹಾಗೂ ಸಮುದಾಯ ಆರೋಗ್ಯ ಸೇವಾ ಕೇಂದ್ರಗಳು ಮೇಳಗಳನ್ನು ಆಯೋಜಿಸುತ್ತವೆ. ಈ ಸ್ಥಂಬವು ಸೂಕ್ಷ್ಮ ಹಾಗೂ ಸುಧಾರಿತ ಜನಸಂಖ್ಯೆಯಲ್ಲಿ ಗರಿಷ್ಠ ಪ್ರಮಾಣದ ಆರೋಗ್ಯ ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಈ ಮೇಳಗಳಲ್ಲಿ ಇಎನ್ ಟಿ, ಕಣ್ಣು ಮತ್ತು ಸೈಕಿಯಾಟ್ರಿಕ್ (ಮನೋವೈದ್ಯಕೀಯ) ಆರೋಗ್ಯದಂತಹ ವಿಶೇಷ ಸೇವೆಗಳನ್ನು ಬ್ಲಾಕ್ ಮಟ್ಟದಲ್ಲಿ ಒದಗಿಸುತ್ತದೆ, ವಿಶೇಷ ಆರೈಕೆಯ ಲಭ್ಯತೆ ಹೆಚ್ಚಿಸುವ ಗುರಿ ಇದೆ. ಆರೈಕೆ ರಕ್ಷಣೆ ಮುಂದುವರಿಕೆ, ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯ ನಡುವೆ ವಿಶ್ವಾಸವೃದ್ಧಿ, ಆರೋಗ್ಯ ಬಯಸುವವರ ನಡವಳಿಕೆ ಸುಧಾರಣೆ ಮತ್ತು ಸಾಕ್ಷರತೆ, ವೈದ್ಯಕೀಯ ಕಾಲೇಜುಗಳ ಜತೆ ಹೆಚ್ಚಿನ ಸಹಭಾಗಿತ್ವ ಮತ್ತು ಅನಾರೋಗ್ಯ ಪೀಡಿತ ಪ್ರತಿಯೊಬ್ಬ ಅಗತ್ಯವಿರುವ ವ್ಯಕ್ತಿಗೆ ಆರೋಗ್ಯ ರಕ್ಷಣಾ ಸೇವೆಗಳನ್ನು ವಿಸ್ತರಿಸುವುದಾಗಿದೆ.
ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಡಿಪಾಯ
ನಿರೀಕ್ಷಿತ ಫಲಿತಾಂಶವೆದರೆ ಪ್ರತಿಯೊಂದು ಗ್ರಾಮ ಮತ್ತು ನಗರ ಪ್ರದೇಶದ ವಾರ್ಡ್ ಗಳು “ಆಯುಷ್ಮಾನ್ ಭಾರತ್ ಪಂಚಾಯತ್“ ಅಥವಾ “ಆಯುಷ್ಮಾನ್ ನಗರ ವಾರ್ಡ್”ಗಳನ್ನಾಗಿ ಪರಿವರ್ತಿಸುವುದಾಗಿದೆ. ತಳಮಟ್ಟದಲ್ಲಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಮುನ್ನೆಡೆಸುತ್ತದೆ. ಪ್ರತಿಯೊಂದು ವಿಭಾಗದಲ್ಲೂ ಆಯ್ದ ಯೋಜನೆಗಳಲ್ಲಿ ಶೇಕಡ 100ರಷ್ಟು ಸಾಧನೆ ಮಾಡುವ ಗ್ರಾಮಗಳಿಗೆ ಪ್ರಮಾಣೀಕರಣ ಉದ್ದೇಶವಿದೆ. ಇದರಡಿ ಆಯುಷ್ಮಾನ್ ಕಾರ್ಡ್ ಗಳ ವಿತರಣೆ, ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ ಐಡಿಗಳ ಸೃಷ್ಟಿ, ಜನಸಂಖ್ಯೆ ಆಧಾರಿತ ತಪಾಸಣೆ, ಪರೀಕ್ಷೆ ಮತ್ತು ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ(ಎನ್ ಸಿಡಿ) ಮತ್ತಿತರವುಗಳು ಸೇರಿವೆ.
ನಾವು ಗರಿಷ್ಠ ಮಟ್ಟದ ಆರೋಗ್ಯ ರಕ್ಷಣಾ ಸೇವಾ ವಿತರಣೆಯ ದೂರದೃಷ್ಟಿಯೊಂದಿಗೆ ಗರಿಷ್ಠ ಪ್ರಮಾಣದ ಆರೋಗ್ಯ ರಕ್ಷಣಾ ಸೇವೆ ಒದಗಿಸುವುದು ಕೇವಲ ಗುರಿಯಲ್ಲ, ಇದು ಬೃಹದಾರಣ್ಯಕ ಉಪನಿಷತ್ತಿನ ಈ ಶ್ಲೋಕದಲ್ಲಿ ಹೇಳಿರುವಂತೆ ನಮ್ಮ ಪುರಾತನ ಬುದ್ಧಿವಂತಿಕೆಗೆ ಅನುಗುಣವಾಗಿ ಪ್ರಧಾನ ಸೇವಕ, ಶ್ರೀ ನರೇಂದ್ರ ಮೋದಿ ಅವರು ಮಾನವೀಯತೆಯ ಸೇವೆಯಲ್ಲಿ ಸೂಚಿಸಿದ ಬದ್ಧತೆಯಂತೆ ನಿಂತಿದ್ದಾರೆ. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ.ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿದ್ ದುಃಖಭಾಗ ಭವೇತ್. ಅಂದರೆ (ಎಲ್ಲರೂ ಸಂತೋಷವಾಗಿರಲಿ, ಎಲ್ಲರೂ ಅನಾರೋಗ್ಯ ಮುಕ್ತವಾಗಿರಲಿ, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಿರಲಿ). ಆಯುಷ್ಮಾನ್ ಭವವು ಎಲ್ಲವನ್ನೂ ಒಳಗೊಳ್ಳುವ ಆರೋಗ್ಯ ಸೇವೆ ನೀಡುವ ಅದೇ ಬದ್ಧತೆಯ ಮೂರ್ತರೂಪವಾಗಿದೆ – ಇದು ಎರಡೂ ಪ್ರಯತ್ನಗಳನ್ನು ಒಳಗೊಂಡಿದೆ. ಮತ್ತು ಉಡುಗೊರೆ, ದೀರ್ಘಾಯುಷ್ಯ ಮತ್ತು ದೃಢವಾದ ಆರೋಗ್ಯದ ನಿರೀಕ್ಷೆಗಳನ್ನು ಪ್ರತಿ ನಾಗರಿಕ ಮತ್ತು ರಾಷ್ಟ್ರಕ್ಕೆ ಒಟ್ಟಾರೆಯಾಗಿ ಉತ್ತೇಜಿಸುತ್ತದೆ.