ದಕ್ಷಿಣ ಭಾರತದ ಸಂಪ್ರದಾಯದಲ್ಲಿ ಬಾಳೆ ಎಲೆಯ ಮೇಲೆ ಆಹಾರ ಸೇವಿಸುವ ಪದ್ಧತಿ ಹಳೇದಿನಗಳಿಂದಲೂ ಪ್ರಸಿದ್ಧವಾಗಿದೆ. ಆದರೆ ಈ ಎಲೆಗಳ ಬಳಕೆಯು ಕೇವಲ ಸಾಂಪ್ರದಾಯಿಕ ಪದ್ಧತಿಯಲ್ಲ, ಆರೋಗ್ಯದ ನೂರಾರು ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದು ಬಹುಮಂದಿಗೆ ತಿಳಿದಿಲ್ಲ.
ಬಾಳೆ ಎಲೆಯು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮತ್ತು ಫೈಬರ್ನಂತಹ ಪೋಷಕಾಂಶಗಳನ್ನು ಹೊಂದಿದ್ದು, ಈ ಎಲ್ಲಾ ಅಂಶಗಳು ದೇಹದ ವಿವಿಧ ಅಂಗಾಂಗಗಳಿಗೆ ಪೋಷಣೆಯನ್ನು ನೀಡುತ್ತವೆ. ಬಾಳೆ ಎಲೆಯ ನೀರನ್ನು ಸೇವಿಸುವುದು ಜೀರ್ಣಕ್ರಿಯೆಯ ಅಭಿವೃದ್ಧಿಗೆ ಸಹಾಯಕವಾಗಿದ್ದು, ಹೊಟ್ಟೆಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಮಲಬದ್ಧತೆ, ಅಜೀರ್ಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಬಳಲುವವರು ಇದನ್ನು ನಿಯಮಿತವಾಗಿ ಸೇವಿಸಿದರೆ ಉತ್ತಮ ಫಲಿತಾಂಶ ಸಿಗಬಹುದು.
ಬಾಳೆ ಎಲೆಯು ದೇಹದ ನಿರ್ವಿಷಗೊಳಿಸುವಿಕೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿರುವ ಆಂಟಿಆಕ್ಸಿಡೆಂಟ್, ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ದೇಹದ ಒಳಗೆ ಹಾನಿಕಾರಕ ರಾಸಾಯನಿಕಗಳು ಹಾಗೂ ಬ್ಯಾಕ್ಟೀರಿಯಾವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಇದರಿಂದ ದೇಹದ ಪ್ರತಿರೋಧ ಶಕ್ತಿಯು ಹೆಚ್ಚಾಗುತ್ತದೆ ಮತ್ತು ವೈರಲ್ ಸೋಂಕುಗಳಿಗೆ ಕಡಿವಾಣ ಹಾಕುವುದು ಸಾಧ್ಯವಾಗುತ್ತದೆ.
ಚರ್ಮದ ಆರೈಕೆಗೂ ಬಾಳೆ ಎಲೆಗಳ ಉಪಯೋಗ ಇದೆ. ಅದರಲ್ಲಿರುವ ಪೌಷ್ಟಿಕ ಅಂಶಗಳು ತ್ವಚೆಗೆ ತಾಜಾತನವನ್ನು ನೀಡುತ್ತವೆ. ಜೊತೆಗೆ ಬಾಳೆ ಎಲೆಯನ್ನು ಬಿಸಿ ನೀರಿನಲ್ಲಿ ಹಾಕಿ ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮದ ಉರಿಯೂತ, ಅಲೆರ್ಜಿ ಸಮಸ್ಯೆಗಳನ್ನು ತಡೆಯಬಹುದು.
ಬಾಳೆ ಎಲೆಗಳ ಉಪಯೋಗ ಕೇವಲ ಆಹಾರ ಪದ್ಧತಿಗಷ್ಟೇ ಸೀಮಿತವಲ್ಲ. ಇದನ್ನು ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಗೆ ಸಹ ನಂಬಿಕೆಯಿಂದ ಬಳಸಬಹುದಾಗಿದೆ.