ನೀರು ನಮ್ಮ ದೇಹಕ್ಕೆ ಅತ್ಯಗತ್ಯವಾದ ಅಂಶ. ಇದಿಲ್ಲದೆ ಮಾನವ ದೇಹ ಚಲಿಸುವುದೇ ಸಾಧ್ಯವಿಲ್ಲ. ದಿನಕ್ಕೆ ಕನಿಷ್ಠ ಎಷ್ಟು ನೀರು ಕುಡಿಯಬೇಕು ಎಂಬುದು ಬಹುತೇಕ ಜನರಿಗೆ ಗೊತ್ತಿರುತ್ತೆ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ನೀರು ಕುಡಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಹೌದು, ಅತಿಯಾದ ನೀರು ಸೇವನೆಯು ಆರೋಗ್ಯದ ಮೇಲೆ ಕೇವಲ ಲಾಭವಲ್ಲ, ಕೆಲವೊಮ್ಮೆ ಹಾನಿಕಾರಕ ಪರಿಣಾಮಗಳನ್ನೂ ಉಂಟುಮಾಡಬಹುದು.
ದೇಹಕ್ಕೆ ನೀರಿನ ಅಗತ್ಯ ಎಷ್ಟಿದೆ?
ವೈದ್ಯರ ಅಭಿಪ್ರಾಯದಂತೆ, ದಿನಕ್ಕೆ ಸರಾಸರಿ 2.5 ರಿಂದ 3 ಲೀಟರ್ ವರೆಗೆ ನೀರು ಕುಡಿಯುವುದು ಆರೋಗ್ಯಕರವಾಗಿದೆ.
ಅತಿಯಾದ ನೀರು ಕುಡಿಯೋದ್ರಿಂದ ಹೈಪೋನಾಟ್ರಿಮಿಯಾ ಸಮಸ್ಯೆ
ಜಾಸ್ತಿ ನೀರು ಕುಡಿದರೆ ರಕ್ತದಲ್ಲಿನ ಸೋಡಿಯಂ ಪ್ರಮಾಣ ಇಳಿಯುತ್ತದೆ. ಇದನ್ನು ವೈದ್ಯಕೀಯವಾಗಿ ಹೈಪೋನಾಟ್ರಿಮಿಯಾ ಎನ್ನುತ್ತಾರೆ. ಇದರಿಂದ ತಲೆಸುತ್ತು, ವಾಂತಿ, ನಿತ್ರಾಣ ಮುಂತಾದ ಸಮಸ್ಯೆಗಳು ಉಂಟಾಗುತ್ತೆ.
ಅತಿಯಾಗಿ ನೀರು ಸೇವಿಸುವವರು ಪ್ರತಿಯೊಂದು ಗಂಟೆಗೆ ಒಂದು ಲೀಟರ್‌ಗಿಂತ ಹೆಚ್ಚು ನೀರು ಕುಡಿಯುವುದು ಎಚ್ಚರಿಕೆಯ ಸಂಗತಿ. ದೇಹಕ್ಕೆ ಬೇಕಾದಷ್ಟು ಮಾತ್ರವೇ ನೀರು ಕುಡಿಯುವುದು ಉತ್ತಮ. ಉದಾಹರಣೆಗೆ, ಕೆಲಸ ಮಾಡದೇ ಇರುವ ವ್ಯಕ್ತಿಗೆ 2 ಲೀಟರ್ ಸಾಕಾಗಬಹುದು, ಆದರೆ ಹೊರಗಡೆ ಶ್ರಮಿಸುವವರು ಅಥವಾ ವ್ಯಾಯಾಮ ಮಾಡೋವರು ಹೆಚ್ಚು ನೀರು ಬೇಕಾಗಬಹುದು.
ಪ್ರತಿಯೊಬ್ಬರ ಅಗತ್ಯ ವಿಭಿನ್ನ
ಬಾಲಕರು, ಗರ್ಭಿಣಿಯರು, ಹಿರಿಯರು, ಹಾಗೂ ಕ್ಯಾನ್ಸರ್/ಮಧುಮೇಹ/ಮೂತ್ರಪಿಂಡ ರೋಗಿಗಳು ಹೆಚ್ಚು ನೀರು ಕುಡಿಯುವ ಮುನ್ನ ವೈದ್ಯರ ಸಲಹೆ ಪಡೆಯಬೇಕು. ದೇಹದ ತೂಕ, ದಿನಚರ್ಯೆ, ಹವಾಮಾನ ಆಧಾರವಾಗಿ ನೀರಿನ ಅಗತ್ಯ ವ್ಯತ್ಯಾಸವಾಗುತ್ತದೆ.
ಹಾಗಾಗಿ, ನೀರನ್ನು ಕೇವಲ ‘ಹೆಚ್ಚು ಕುಡಿದರೆ ಆರೋಗ್ಯಕ್ಕು ಲಾಭ’ ಎನ್ನುವ ನಂಬಿಕೆಯಿಂದಲೇ ಕುಡಿಯಬಾರದು. ಬದಲಾಗಿ, ದೇಹದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ವೈದ್ಯರ ಸಲಹೆಯ ಪ್ರಕಾರ ಮಾತ್ರ ನೀರಿನ ಸೇವನೆ ಮಾಡಬೇಕು. ವಿಶೇಷವಾಗಿ ಮಧುಮೇಹ, ಮೂತ್ರಪಿಂಡ ಸಮಸ್ಯೆ ಇರುವವರು ಜಾಸ್ತಿ ನೀರು ಸೇವಿಸುವ ಮುನ್ನ ವೈದ್ಯರ ಅಭಿಪ್ರಾಯ ಪಡೆಯುವುದು ಅತ್ಯಾವಶ್ಯಕ.
ನೀರು ಜೀವನದ ಮೂಲಭೂತ ಅಂಗ. ಆದರೆ ಅದೂ ‘ಅಳತೆಯಿಂದಾದರೆ ಅಮೃತ, ಅಳತೆ ಮೀರಿದರೆ ವಿಷ’ ಎಂಬ ಮಾತು ಇಲ್ಲಿಯೂ ಅನ್ವಯವಾಗುತ್ತದೆ.