ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪುರುಷನೊಂದಿಗೆ ಜೀವನ ಕಟ್ಟಿಕೊಳ್ಳಲು ಬಯಸಿದ ವಿವಾಹಿತ ಮಹಿಳೆ ತನ್ನ ಮೂವರು ಪುಟ್ಟ ಮಕ್ಕಳನ್ನೇ ಬಲಿಕೊಟ್ಟ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಈ ಅಮಾನುಷ ಕೃತ್ಯಕ್ಕೆ ಆಕೆಯ ಪ್ರಿಯಕರ ಸಹಕರಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಲಾಹೋರ್‌ನ ಗುಜರಾತ್ ಜಿಲ್ಲೆಯ ಸರೈ ಅಲಮ್‌ಗಿರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿಗಳೆಂದು ಗುರುತಿಸಲ್ಪಟ್ಟಿರುವ ಸಿದ್ರಾ ಬಶೀರ್ ಮತ್ತು ಬಾಬರ್ ಹುಸೇನ್, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳಿಗೆ ಮೊದಲು ಹಣ್ಣಿನ ಚಾಟ್‌ನಲ್ಲಿ ನಿದ್ರೆ ಮಾತ್ರೆಗಳನ್ನು ಮಿಶ್ರಣ ಮಾಡಿ ನೀಡಲಾಗಿದ್ದು, ಅವರು ಗಾಢ ನಿದ್ರೆಗೆ ಜಾರಿದ ನಂತರ ಒಬ್ಬೊಬ್ಬರಾಗಿ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: Rice series 41 | ಆರೋಗ್ಯಕರ ನೆಲ್ಲಿಕಾಯಿ ಚಿತ್ರಾನ್ನ ಸವಿದಿದ್ದೀರಾ?
ಪೊಲೀಸರ ಪ್ರಕಾರ, ಸಿದ್ರಾ ತನ್ನ ಪತಿಯೊಂದಿಗೆ ವಿಚ್ಛೇದನಕ್ಕೆ ಒತ್ತಾಯಿಸುತ್ತಿದ್ದಳು. ಮಕ್ಕಳು ಜೀವಂತವಾಗಿದ್ದರೆ ಮದುವೆಯಾಗಲು ಅಡ್ಡಿಯಾಗುತ್ತಾರೆ ಎಂಬ ಕಾರಣದಿಂದ ಈ ಕೃತ್ಯಕ್ಕೆ ಇಬ್ಬರೂ ಸೇರಿ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ವಿಚಾರಣೆಯ ವೇಳೆ ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹತ್ಯೆಯ ನಂತರ ಶವಗಳನ್ನು ಗುರುತಿಸಲಾಗದಂತೆ ನಿರ್ಜನ ಪ್ರದೇಶದಲ್ಲಿ ಸುಟ್ಟು ಹೂತುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿದ್ರಾ ಅವರ ಪತಿ ಪತ್ನಿ ಮತ್ತು ಮಕ್ಕಳು ಕಾಣೆಯಾಗಿದ್ದಾರೆಂದು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

