ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಸಂಭ್ರಮದ ನಡುವೆ ಬೆಚ್ಚಿಬೀಳಿಸುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಪ್ರಿಯಕರನೊಂದಿಗೆ ಇದ್ದ ಸಂಬಂಧದ ವಿಚಾರದಲ್ಲಿ ಉಂಟಾದ ತೀವ್ರ ಕಲಹ ಕೊನೆಗೆ ಭೀಕರ ದಾಳಿಗೆ ಕಾರಣವಾಗಿದೆ. ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನು ಮನೆಗೆ ಕರೆಸಿ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾಳೆ.
ಪೊಲೀಸ್ ಮೂಲಗಳ ಪ್ರಕಾರ, 25 ವರ್ಷದ ವಿವಾಹಿತ ಮಹಿಳೆ ಮತ್ತು 44 ವರ್ಷದ ವ್ಯಕ್ತಿಯೊಬ್ಬ ಕಳೆದ ಆರು ಏಳು ವರ್ಷಗಳಿಂದ ಸಂಬಂಧದಲ್ಲಿದ್ದರು. ಮಹಿಳೆ ತನ್ನ ಪ್ರಿಯಕರ ಪತ್ನಿಯನ್ನು ಬಿಟ್ಟು ತನ್ನನ್ನೇ ಮದುವೆಯಾಗಬೇಕೆಂದು ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಇದರಿಂದ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದು, ಇತ್ತೀಚೆಗೆ ಆ ವ್ಯಕ್ತಿ ಸಂಬಂಧದಿಂದ ದೂರ ಉಳಿಯಲು ಯತ್ನಿಸುತ್ತಿದ್ದ ಎಂದು ಹೇಳಲಾಗಿದೆ.
ಡಿಸೆಂಬರ್ 31ರಂದು ಹೊಸ ವರ್ಷಕ್ಕೆ ಸ್ವೀಟ್ ನೀಡುವ ನೆಪದಲ್ಲಿ ಮಹಿಳೆ ಪ್ರಿಯಕರನನ್ನು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಮನೆಯೊಳಗೆ ಮಕ್ಕಳು ನಿದ್ರಿಸುತ್ತಿದ್ದ ವೇಳೆ, ಆಕೆ ಅಡುಗೆ ಮನೆಯಿಂದ ಚಾಕು ತಂದು ಪ್ರಿಯಕರನ ಖಾಸಗಿ ಅಂಗದ ಮೇಲೆ ಹಠಾತ್ ದಾಳಿ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿ ನರಳಾಡಿಕೊಂಡು ಮನೆ ತಲುಪಿದ್ದು, ನಂತರ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ಬಳಿಕ ಮಹಿಳೆ ತಲೆಮರೆಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

