ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಗಳಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವಾಗ ಹಸಿರು ಅಥವಾ ನೀಲಿ ಬಣ್ಣದ ಗೌನ್ ಧರಿಸುತ್ತಾರೆ. ರೋಗಿಯ ಬಟ್ಟೆಯೂ ಕೂಡ ಹಸಿರು, ನೀಲಿ ಬಣ್ಣದ್ದೇ ಆಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಆಸ್ಪತ್ರೆಗಳಲ್ಲೂ ಇದೇ ರೀತಿ ವಸ್ತ್ರಗಳನ್ನು ಬಳಸುತ್ತಾರೆ. ಹಾಸಿಗೆ,ಹೊದಿಕೆ ಎಲ್ಲವೂ ನೀಲಿ-ಹಸಿರು ಬಣ್ಣಗಳದ್ದೇ ಆಗಿರುತ್ತದೆ. ಈ ಬಣ್ಣಗಳನ್ನು ಮಾತ್ರ ಏಕೆ ಬಳಸಲಾಗುತ್ತದೆ? ಎಂದು ಎಂದಾದರೂ ಯೋಚಿಸಿದ್ದೀರಾ?..
ಹಸಿರು ಆರೋಗ್ಯ ಮತ್ತು ಸಮೃದ್ಧಿಯ ಸಂಕೇತ, ಪ್ರಕೃತಿಯ ಪ್ರತೀಕ. ಈ ಬಣ್ಣ ಕಂಡಾಗಲೆಲ್ಲಾ ಮನಸ್ಸು ಶಾಂತವಾಗಿರುತ್ತದೆ. ಆಸ್ಪತ್ರೆಗಳಲ್ಲಿ ಹಸಿರು ಬಣ್ಣದ ಹಿಂದಿನ ಅರ್ಥವೂ ಇದೇ.
ಹಸಿರು ಹೊರತಾಗಿ ಬೇರೆ ಬಣ್ಣದ ಬಟ್ಟೆಗಳನ್ನು ಧರಿಸಿ, ಬಟ್ಟೆಯ ಮೇಲೆ ರಕ್ತ ಬಿದ್ದರೆ ಆ ಬಣ್ಣ ಹೆಚ್ಚು ಕಾಣಿಸಿ ರೋಗಿಗಳಿಗೆ ಆತಂಕ ಉಂಟು ಮಾಡುತ್ತದೆ. ಅದು ರೋಗಿಗೆ ಒಳ್ಳೆಯದಲ್ಲ. ಆತಂಕವು ಬಿಪಿಯನ್ನು ಹೆಚ್ಚಿಸಬಹುದು. ಹಸಿರು ಬಟ್ಟೆಯ ಮೇಲೆ ರಕ್ತವು ಕೆಂಪು ಬಣ್ಣದಲ್ಲಿ ಕಾಣಿಸುವುದಿಲ್ಲ. ಇದು ಸ್ವಲ್ಪ ಕಂದು ಬಣ್ಣದಂತೆ ಕಾಣುತ್ತದೆ. ಹಾಗಾಗಿಯೇ ಹಸಿರನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಅದೇ ನೀಲಿ ಬಣ್ಣವನ್ನು ಕಂಡರೆ ಮನಸ್ಸಿಗೆ ನೆಮ್ಮದಿ. ನೀಲಾಕಾಶವನ್ನು ನೋಡುವಾಗ ಎಷ್ಟು ಹಿತವೆನಿಸುತ್ತದೆಯೋ.. ಹಾಗೆಯೇ ನೀಲಿ ಸಮುದ್ರವನ್ನು ನೋಡಿದಾಗಲೂ ಹಿತ ಅನಿಸುತ್ತದೆ. ರೋಗಿ ಮತ್ತು ಅವರ ಬಂಧುಗಳು ಸಹ ಶಾಂತವಾಗಿದ್ದರೆ ರೋಗಿ ಬೇಗ ಚೇತರಿಸಿಕೊಳ್ಳಬಹುದು. ನೀಲಿ ಬಣ್ಣವು ರೋಗಿಯ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.