ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬೇಸಿಗೆಯಲ್ಲಿ ಸಿಲಿಕಾನ್ ಸಿಟಿ ಮಂದಿಗೆ ನೀರಿನ ಸಮಸ್ಯೆ ಆಗೋದಿಲ್ಲ ಯಾಕೆ ಗೊತ್ತಾ? ಕೆಆರ್‌ಎಸ್ ಅಣೆಕಟ್ಟಿನಲ್ಲಿ 27 ಟಿಎಂಸಿ ಅಡಿ ನೀರು ಲಭ್ಯವಿದೆ. ಹೀಗಾಗಿ ಈ ಬಾರಿಯ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಬಗ್ಗೆ ಬೆಂಗಳೂರಿಗರು ಚಿಂತಿಸಬೇಕಾಗಿಲ್ಲ ಏಕೆಂದರೆ ಬೆಂಗಳೂರಿಗೆ ಮುಖ್ಯ ನೀರಿನ ಮೂಲವಾದ ಕೆಆರ್‌ಎಸ್ ಅಣೆಕಟ್ಟಿನಲ್ಲಿ 6 ಟಿಎಂಸಿ ಅಡಿ ನೀರಿನ ಅವಶ್ಯಕತೆಗೂ ಹೆಚ್ಚಾಗಿ 27 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಹೇಳಿದರು.
ಅಕ್ಟೋಬರ್ 2024 ರಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ದಿನಕ್ಕೆ 775 ಮಿಲಿಯನ್ ಲೀಟರ್ (ಎಂಎಲ್‌ಡಿ) ನೀರನ್ನು ಪೂರೈಸಿದೆ, ನಗರದ ಹೊರ ಪ್ರದೇಶಗಳಲ್ಲಿ ಮಾತ್ರ ನೀರು ಸರಬರಾಜಿನಲ್ಲಿ ಕೆಲವು ಸಮಸ್ಯೆಗಳಿದ್ದು, ಪೈಪ್‌ಲೈನ್ ಸಂಪರ್ಕ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಂದ ಬಿಡಬ್ಲ್ಯೂಎಸ್‌ಎಸ್‌ಬಿಗೆ ಒಟ್ಟು 35 ಟಿಎಂಸಿಎಫ್‌ಟಿ ನೀಡಲಾಗುತ್ತಿದ್ದು, ಕಬಿನಿಯಲ್ಲಿ 29 ಟಿಎಂಸಿಎಫ್‌ಟಿ ಸಂಗ್ರಹವಿದೆ. ಕಳೆದ ವರ್ಷ ಏಪ್ರಿಲ್ 1 ರಂದು, ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 13.42 ಟಿಎಂಸಿಎಫ್‌ಟಿ ಮತ್ತು ಕಬಿನಿಯಲ್ಲಿ 9.39 ಟಿಎಂಸಿಎಫ್‌ಟಿ ಇತ್ತು. ಈ ಬಾರಿ ಮಳೆ ಉತ್ತಮವಾಗಿದ್ದ ಹಿನ್ನೆಲೆಯಲ್ಲಿ ನೀರು ಸಂಗ್ರಹ ಕೂಡ ಹೆಚ್ಚಿದೆ ಎಂದು ಹೇಳಿದರು.