ಮೇಘನಾ ಶೆಟ್ಟಿ, ಶಿವಮೊಗ್ಗ
ಸಾಮಾಜಿಕ ಜಾಲತಾಣಗಳಿಲ್ಲದೆ ಜೀವನ ಎಲ್ಲಿದೆ? ನಮ್ಮ ಮನೆಯ ಬಾಲ್ಕನಿ ವ್ಯೂನಿಂದ ಕಾಣೋ ಸೂರ್ಯ, ಕೆಳಗೆ ಬೊಗಳುವ ಬೀದಿ ನಾಯಿ, ನನ್ನ ಹೆಂಡತಿಯ ಕೈ ಬೆರಳು, ಹೋದ ಹೋಟೆಲ್ಲ, ಸಿಕ್ಕ ಸ್ನೇಹಿತರು, ಕೇಳೋ ಹಾಡು, ಪಡೆದ ಮೆಡಲ್ಲು, ತೀರಿಕೊಂಡ ಅಜ್ಜ, ನಟನ ಹುಟ್ಟುಹಬ್ಬ.. ಹೀಗೆ ತಿಂದದ್ದು, ತಟ್ಟೆಯಲ್ಲಿ ಉಳಿಸಿದ್ದು ಎಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲೇಬೇಕು, ಜನಕ್ಕೆ ನಾವು ಬದುಕಿದ್ದೇವೆ ಎಂದು ಹೇಳಲೇಬೇಕು..
ಕೆಲವೊಮ್ಮೆ ಸುಸ್ತಾಗಿದ್ದರೂ ಎಲ್ಲಿಗೆ ಹೋಗೋಕೆ ಮನಸ್ಸೇ ಇಲ್ಲದಿದ್ದರೂ ಒಂದೆರಡು ಫೋಟೊ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗ ಬರುವ ಲೈಕ್ಸ್, ಕಮೆಂಟ್ಸ್‌ಗಳನ್ನು ನೆನೆದು ದಣಿವಾದ ಕಾಲುಗಳನ್ನು ಎತ್ತಿ, ಭಾರವಾದ ಮನಸ್ಸಿನಿಂದ ಬಟ್ಟೆ ಆರಿಸಿ, ಇಷ್ಟವಿಲ್ಲದೆ ಮೇಕಪ್ ಮೆತ್ತಿ ಹೊರಡುತ್ತೇವೆ. ಆದರೆ ಫೋಟೊ ಮಾತ್ರ ಅದ್ಭುತ, ಕಮೆಂಟ್ಸ್ ಅತ್ಯದ್ಭುತ.
ಒಮ್ಮೆ ಕೂಲ್ ಆಗಿ ಕುಳಿತು ಯೋಚಿಸಿ ಇದು ನಮಗೆ ನಿಜವಾಗಿಯೂ ಅವಶ್ಯಕತೆ ಇದೆಯಾ? ಒಂದು ಬಾರಿಯಾದ್ರೂ ಫೋನ್ ಇಲ್ಲದ ಸನ್‌ಸೆಟ್, ಬೀಚ್ ಕಂಡಿದ್ದೀರಾ? ಫೋನ್‌ನಲ್ಲಿ ಪೋಸ್ಟ್ ಮಾಡದೇ ನೆಮ್ಮದಿಯಾಗಿ ತಿಂದಿದ್ದೀರಾ?
ಸಾಮಾಜಿಕ ಜಾಲತಾಣಗಳನ್ನು ಬಳಸಲೇಬೇಡಿ ಎಂದು ಹೇಳೋದಿಲ್ಲ. ಆದರೆ ಎಲ್ಲದಕ್ಕೂ ಲಿಮಿಟ್ ಇರಲಿ, ಸಾಮಾಜಿಕ ಜಾಲತಾಣಗಳನ್ನು ಮಿತವಾಗಿ ಬಳಸಿ, ಇದಕ್ಕೆ ಕಾರಣಗಳೂ ಇವೆ..
ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಒತ್ತಡ, ಖಿನ್ನತೆ ಸಾಧ್ಯ. ನಾನು ಒಂಟಿ, ನನಗೆ ಲೈಕ್ಸ್ ಬಂದಿಲ್ಲ ಅನ್ನೋದು ಮುಂದೆ ಕುತ್ತಿಗೆಗೆ ಬರೋ ವಿಷಯವೂ ಆಗಬಹುದು.
ಫಿಯರ್ ಆಫ್ ಮಿಸ್ಸಿಂಗ್ ಔಟ್ ಬಗ್ಗೆ ಕೇಳಿದ್ದೀರಾ? ಇದು ಖಂಡಿತಾ ನಿಜ, ನನ್ನನ್ನು ಬಿಟ್ಟು ಹೋಗಿದ್ದಾರೆ, ನನ್ನ ಜೊತೆ ಡಿಪಿ ಹಾಕಿಲ್ಲ, ನನ್ನನ್ನು ಟ್ಯಾಗ್ ಮಾಡಿಲ್ಲ. ಹೀಗೆ ಒಂದಲ್ಲಾ, ಎರಡಲ್ಲಾ ಸಾವಿರಾರು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತೀರಿ.
ನೀವು ಸಾಮಾಜಿಕ ಜಾಲತಾಣಗಳಲ್ಲಿ ಕಂಡಿದ್ದೆಲ್ಲಾ ನಿಜವಲ್ಲ, ನಿಮ್ಮ ಬಿಹೇವಿಯರ್, ಮಾತನಾಡುವ ರೀತಿ, ಸ್ಟೈಲ್, ಎಲ್ಲವನ್ನೂ ಸಾಮಾಜಿಕ ಜಾಲತಾಣ ಬದಲಾಯಿಸುತ್ತದೆ. ಇದು ನೆಗೆಟಿವ್ ಕೂಡ ಆಗಬಹುದು.
ನಿಮ್ಮ ಕಾನ್ಫಿಡೆನ್ಸ್ ಕಡಿಮೆ ಮಾಡೋಕೆ ಸೋಶಿಯಲ್ ಮೀಡಿಯಾ ಒಂದೇ ಸಾಕು. ಬೇರೆಯವರ ಜೀವನದ ಜತೆ ನಿಮ್ಮ ಜೀವನವನ್ನು ಕಂಪೇರ್ ಮಾಡಿಕೊಂಡು, ಸದಾ ನೋವು ಅನುಭವಿಸುವಂತಾಗುತ್ತದೆ.
ಎಷ್ಟೆಲ್ಲಾ ಸಮಯ ಹಾಳು ಅಲ್ವಾ? ಬೇಕಿದ್ದಷ್ಟು ನೋಡಿ ಸುಮ್ಮನಾಗಬಹುದು, ಕಣ್ಣು ನೋಯಿಸಿಕೊಂಡು ಸಿಕ್ಕಿದ್ದೆಲ್ಲಾ ನೋಡುತ್ತಾ ಕುಳಿತರ ಸಮಯ ವ್ಯರ್ಥವಾಗುತ್ತದೆ. ಉಪಯೋಗ ಏನೂ ಆಗೋದಿಲ್ಲ.